ಹಾಸನ, ಫೆಬ್ರವರಿ 26: ರಾಜ್ಯದಲ್ಲಿ ಇನ್ನೂ ಅನಿಷ್ಟ ಜೀತ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಹಾಸನ ಜಿಲ್ಲೆಯ ಹಳೇಬೀಡು ಹೋಬಳಿಯ ಚಟ್ನಹಳ್ಳಿ ಗ್ರಾಮದಲ್ಲಿ ಕೂಡಿಹಾಕಲಾಗಿದ್ದ 18ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ್ದಾರೆ.
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಶುಂಠಿ ಕೆಲಸಕ್ಕೆಂದು ಕರೆತರಲಾಗಿದ್ದ ಕಾರ್ಮಿಕರನ್ನು ನಾಗರಾಜ್ ಎಂಬಾತ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡು ದುಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಇವರಿಗೆ ಯಾವುದೇ ಕೂಲಿ ನೀಡದೆ, ಕೆಲಸ ಮುಗಿದ ಬಳಿಕ ಒಂದೇ ಸ್ಥಳದಲ್ಲಿ ಲಾಕ್ ಮಾಡಿ ಇರಿಸಲಾಗುತ್ತಿತ್ತು. ಹೊರಗೆ ಹೋಗಲು ಅವಕಾಶ ನೀಡಲಾಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿ ನಾಗರಾಜ್ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ರಕ್ಷಿಸಲ್ಪಟ್ಟ ಕಾರ್ಮಿಕರು ತಾವು ಅನುಭವಿಸಿದ ಕಷ್ಟಗಳು ಹಾಗೂ ಬಂಧಕ ಸ್ಥಿತಿಯನ್ನು ಪೊಲೀಸರ ಮುಂದೆ ವಿವರಿಸಿದ್ದಾರೆ.
ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕಾರ್ಮಿಕ ಶೋಷಣೆ ನಡೆಯುತ್ತಿರುವುದನ್ನು ಬಯಲಿಗೆಳೆದಿದ್ದು, ಸಂಬಂಧಿಸಿದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
