ರಾಮನಾಥಪುರ, ಏ.2: ತಂಬಾಕು ಬೆಳೆಗಾರರಿಗೆ ಸೂಕ್ತ ಬೆಲೆ ನೀಡದೇ ತಂಬಾಕು ಮಂಡಳಿ ಮತ್ತು ಖರೀದಿ ಕಂಪನಿಗಳು ಬೆಳೆಗಾರರನ್ನು ವಂಚಿಸುತ್ತಿವೆ ಎಂದು ಆರೋಪಿಸಿ, ಇದನ್ನು ಖಂಡಿಸಿ ಏಪ್ರಿಲ್ 6ರಂದು ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ಎದುರು ಭಾರತೀಯ ತಾಲ್ಲೂಕು ರೈತ ಸಂಘ ಹಾಗೂ ತಂಬಾಕು ಬೆಳೆಗಾರರು ಅಹೋರಾತ್ರಿ ಧರಣಿ ಹಮ್ಮಿಕೊಂಡಿರುವುದಾಗಿ ಭಾರತೀಯ ರೈತ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಸೀಬಹಳ್ಳಿ ಯೋಗಣ್ಣ ತಿಳಿಸಿದ್ದಾರೆ.
ರಾಮನಾಥಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ತಂಬಾಕು ಮಂಡಳಿಯ ವಹಿವಾಟು ಆರಂಭವಾಗಿ 5 ತಿಂಗಳು ಕಳೆದರೂ ಇನ್ನೂ ಅರ್ಧದಷ್ಟು ತಂಬಾಕು ಮಾರಾಟವಾಗಿಲ್ಲ. ಮಂಡಳಿಗೆ ಬೆಳೆಗಾರರು ತರುವ ತಂಬಾಕಿಗೆ ಕಂಪನಿಗಳು ತಮಗೆ ಇಷ್ಟ ಬಂದಂತೆ ದರ ನಿಗದಿ ಮಾಡುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ತಂಬಾಕು ಮಂಡಳಿ ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಕಳೆದ ವರ್ಷ ಅಕ್ಟೋಬರ್ 10ರಂದು ತಂಬಾಕು ವಹಿವಾಟು ಆರಂಭವಾಗಿದ್ದರೂ ಈವರೆಗೆ ಬೆಲೆ ಸ್ಥಿರತೆ ಕಂಡಿಲ್ಲ. ಹಾಸನ ಮತ್ತು ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕ್ಷೇತ್ರದ ಶಾಸಕ ಎ. ಮಂಜು ಹಾಗೂ ಇತರರು ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದಲ್ಲದೆ, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಕೂಡ ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಧ್ವನಿ ಎತ್ತಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಬೆಳೆಗಾರರು ಹೋರಾಟದ ಹಾದಿ ಹಿಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಯೋಗಣ್ಣ ಹೇಳಿದರು.

30 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಗಾರರ ಸಂಕಷ್ಟ
ರಾಮನಾಥಪುರ ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಗಾರರು ಇದ್ದು, ಕಳೆದ ಸುಮಾರು 50 ವರ್ಷಗಳಿಂದ ಈ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಹಾಸನ ಜಿಲ್ಲೆಯ ಹೊಳೆನರಸಿಪುರ, ಅರಕಲಗೂಡು, ಹಾಸನ ತಾಲ್ಲೂಕುಗಳು, ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ, ಮೈಸೂರು ಜಿಲ್ಲೆಯ ಪಿರಿಯಪಟ್ಟಣ ತಾಲ್ಲೂಕಿನ ಕೆಲವು ಹೋಬಳಿ ಪ್ರದೇಶಗಳು ಈ ವ್ಯಾಪ್ತಿಗೆ ಒಳಪಡುತ್ತವೆ.
ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯ ಜೊತೆಗೆ ಮೈಸೂರು ಜಿಲ್ಲೆಯ ಕಗ್ಗುಂಡಿ, ಹೆಗ್ಗಡದೇವನಕೋಟೆ, ಪಿರಿಯಪಟ್ಟಣ ಸೇರಿದಂತೆ 7ಕ್ಕೂ ಹೆಚ್ಚು ತಂಬಾಕು ಹರಾಜು ಮಾರುಕಟ್ಟೆಗಳಲ್ಲಿ ಉತ್ತಮ ದರ್ಜೆಯ ತಂಬಾಕು ಬೆಳೆಯಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರಕ್ಕೆ ನೂರಾರು ಕೋಟಿ ಆದಾಯ – ರೈತರಿಗೆ ಮಾತ್ರ ಬೆಲೆ ಸ್ಥಿರತೆ ಇಲ್ಲ
ತಂಬಾಕಿನಿಂದ ತಯಾರಾಗುವ ಉತ್ಪನ್ನಗಳ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ ವಿದೇಶಿ ವಿನಿಮಯ ಹಾಗೂ ತೆರಿಗೆ ರೂಪದಲ್ಲಿ ನೂರಾರು ಕೋಟಿ ರೂ. ಆದಾಯ ಬರುತ್ತಿದ್ದರೂ, ತಂಬಾಕು ಬೆಳೆಗಾರರಿಗೆ ಮಾತ್ರ ಯಾವುದೇ ಬೆಲೆ ಸ್ಥಿರತೆ ಇಲ್ಲ ಎಂಬುದು ವಿಷಾದನೀಯ ಸಂಗತಿ. ಆದ್ದರಿಂದ ಕೇಂದ್ರ ಸರ್ಕಾರ ತಂಬಾಕಿಗೆ ಬೆಲೆ ಸ್ಥಿರತೆ ಕಲ್ಪಿಸಿ, ಬೆಳೆಗಾರರ ಹಿತ ರಕ್ಷಿಸಬೇಕು ಎಂದು ಸೀಬಹಳ್ಳಿ ಯೋಗಣ್ಣ ಒತ್ತಾಯಿಸಿದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
