ಚಾಮರಾಜನಗರ: ಚಾಮರಾಜನಗರದಲ್ಲಿ ದಸರಾ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಒತ್ತಾಯಿಸಿ ಜಿಲ್ಲಾ ಕಲಾವಿದರ ಒಕ್ಕೂಟದಿಂದ ವಿವಿಧ ವೇಷ ಭೂಷಣ ಧರಿಸಿ ನಗರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ಪ್ರತಿಭಟನೆ ಬಿ ರಾಜಯ್ಯ ಜೋಡಿ ರಸ್ತೆಯ ಮೂಲಕ ಸಾಗಿ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾ ದಸರಾ ಆಚರಣೆ ಸಮಿತಿಯ ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ಹೊರ ಹಾಕಿದರು.

1997ರಲ್ಲಿ ಪ್ರತ್ಯೇಕ ಜಿಲ್ಲೆಯಾಗಿ ರೂಪಗೊಂಡ ಚಾಮರಾಜನಗರ ಜಿಲ್ಲೆಯಲ್ಲಿ 2007ರಿಂದ ಗ್ರಾಮೀಣ ದಸರಾ ಎಂಬ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿತ್ತು. 2013 ರಿಂದ ಚಾಮರಾಜನಗರ ದಸರಾ ಎಂಬ ಹೆಸರಿನಿಂದಲೇ ದಸರಾ ಉತ್ಸವಗಳು ಆಯೋಜನೆಗೊಂಡಿತು. ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಚಾಮರಾಜನಗರ ಉಸ್ತುವಾರಿ ಸಚಿವರಾಗಿದ್ದ ದಿ.ಎಚ್ಎಸ್ ಮಾದೇವ ಪ್ರಸಾದ್ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರ ಕಾಳಜಿಯಿಂದ ಚಾಮರಾಜನಗರದಲ್ಲಿ ದಸರಾ ಆರಂಭವಾಯಿತು. ಅಂದಿನಿಂದ ಇಲ್ಲಿಯವರೆಗೂ ಸತತವಾಗಿ ನಡೆದುಕೊಂಡು ಬರುತ್ತಿದ್ದ ದಸರಾವನ್ನು ಪ್ರಸ್ತುತ ವರ್ಷದಲ್ಲಿ ಚಾಮರಾಜನಗರದಲ್ಲಿ ದಸರಾ ಆಚರಣೆ ಬೇಡ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ಜಿಲ್ಲೆಯ ಜನರಿಗೆ ಹಾಗೂ ಕಲಾವಿದರಿಗೆ ನೋವು ಮತ್ತು ಅವಕಾಶ ವಂಚಿತರಾಗುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರ ಹಾಕಿದರು.

ಚಾಮರಾಜನಗರದ ಭೂ ಪ್ರದೇಶವು ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತು ಎಂಬುದಕ್ಕೆ ಉತ್ತಮ ನಿರ್ದೇಶನಗಳು ಇತಿಹಾಸದ ದಾಖಲೆಗಳಲ್ಲಿವೆ. ಆ ಕಾರಣಕ್ಕಾಗಿ ಈ ವರವಿಗೂ ಇಲ್ಲಿ ದಸರಾ ಕಾರ್ಯಕ್ರಮಗಳು ನಡೆದುಕೊಂಡು ಬಂದಿದೆ. ಜಿಲ್ಲೆಯ ಜನರು ಭಾವನಾತ್ಮಕವಾಗಿ ಮೈಸೂರಿನೊಂದಿಗೆ ಸಂಬಂಧ ಬೆಸೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ಕಲಾವಿದರಿದ್ದು, ಮೈಸೂರಿನ ದಸರಾ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಅವಕಾಶಗಳು ಲಭ್ಯವಾಗುವುದಿಲ್ಲ. ಇಲ್ಲಿನ ನಾಗರಿಕರು ಮೈಸೂರಿಗೆ ಹೋಗಿ ದಸರಾ ವೈಭವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಕಷ್ಟವಾಗುತ್ತದೆ. ಎಂದಿನಂತೆ ನಡೆಯುತ್ತಿದ್ದ ಚಾಮರಾಜನಗರ ದರಸಾವನ್ನು ಈ ಬಾರಿಯು ಸಹ ಯಾವುದೇ ಅಡೆತಡೆಗಳಿಲ್ಲದೆ ಆಚರಣೆ ಮಾಡಬೇಕು ಮತ್ತು ಇಲ್ಲಿನ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ರವರಿಗೆ ಮನವಿ ಪತ್ರದ ಮೂಲಕ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾಹಿತಿ ಸೋಮಶೇಖರ ಬಿಸಲ್ವಾಡಿ, ನಟರಾಜ್, ಸುರೇಶ್, ಜನಪದ ಮಹೇಶ್, ಸಿ ಎಂ ನರಸಿಂಹಮೂರ್ತಿ, ಉಮ್ಮತ್ತೂರು ಚಂದ್ರು, ಶಿವಣ್ಣ, ಗುಂಡ್ಲುಪೇಟೆ ಮೋಹನ್, ಸದ್ದಾಂ, ಮಂಗಲ ಶಿವಣ್ಣ, ಶಿವರುದ್ದರಸ್ವಾಮಿ, ತಂಬೂರಿ ತುಳಸಮ್ಮ , ಶಿವು ಚೆಟ್ಟು ಸೇರಿದಂತೆ ಇತರರು ಇದ್ದರು.
– ಶ್ರೀ ಸಾಯಿ ಎಸ್ ಮಂಜು
