ಭುವನೇಶ್ವರ: ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಕೆಲವು ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ತಿಳಿಸಿದ್ದಾರೆ.
ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಅನಧಿಕೃತವಾಗಿ ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದರು. ಇತ್ತೀಚೆಗೆ ಕೆಲವು ಸಂಸ್ಥೆಗಳು ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿ (ಎಸ್ಜೆಟಿಎ)ಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ, ಆನ್ಲೈನ್ ವೇದಿಕೆ ಮೂಲಕ ಭಕ್ತರಿಗೆ ಪ್ರಸಾದ ತಲುಪಿಸುವ ಯೋಜನೆ ವಿವರಿಸಲಾಗಿತ್ತು.
ವಿಶ್ವದಾದ್ಯಂತ ಭಕ್ತರಿಗೆ ಪ್ರಸಾದ ಒದಗಿಸುವುದು ಒಳ್ಳೆಯ ವಿಚಾರವಾದರೂ, ಆನ್ಲೈನ್ ಮಾರಾಟದ ಮೂಲಕ ಅದರ ಪಾವಿತ್ರ್ಯತೆಯನ್ನು ಕಾಪಾಡುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಸರ್ಕಾರ ಮತ್ತು ಎಸ್ಜೆಟಿಎ ಬಂದಿರುವುದಾಗಿ ಹರಿಚಂದನ್ ಹೇಳಿದರು.
ಭಕ್ತರು ಸ್ವಯಂ ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಮಹಾಪ್ರಸಾದ ಸೇವಿಸಬೇಕೆಂದು ಅವರು ಮನವಿ ಮಾಡಿದರು. ಮಹಾಪ್ರಸಾದದ ಪರಿಷ್ಕೃತ ದರಪಟ್ಟಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದಾಗಿ ಸಚಿವರು ತಿಳಿಸಿದರು.
