ಹಾಸನ: ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅವರ ಕಾದಂಬರಿ ಆಧಾರಿತ ಮಕ್ಕಳ ಕನ್ನಡ ಚಿತ್ರ ‘ಪುಟ್ಟಗೂಡಿನ ಪಟ್ಟದರಸಿ’ ಚಿತ್ರೀಕರಣ ಪೂರ್ಣಗೊಂಡು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಪ್ರವೇಶಿಸಿದೆ. ಹಾಸನದ ಉದಯಗಿರಿಯ ನಾದ ವೈಭವ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕಾರ್ಯ ಸೋಮವಾರದಿಂದ ಆರಂಭಗೊಂಡಿದ್ದು, ಚಿತ್ರತಂಡದಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಸಕಲೇಶಪುರ ತಾಲ್ಲೂಕಿನ ಅರುಣ್ ಗೌಡ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರವು, ಹಾಸನ ಜಿಲ್ಲೆಯ ಆಲೂರು, ತಾಳೂರು ಹಾಗೂ ಬೇಲೂರು ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಸ್ಥಳೀಯ ವಿದ್ಯಾರ್ಥಿಗಳು ಮತ್ತು ಕಲಾವಿದರು ಅಭಿನಯಿಸಿರುವುದರಿಂದ ಚಿತ್ರಕ್ಕೆ ನೈಜತೆಯ ಸ್ಪರ್ಶ ಹೆಚ್ಚಾಗಿದೆ.
ಚಿತ್ರದ ನಿರ್ಮಾಣವನ್ನು ಸಕಲೇಶಪುರ ಮೂಲದ ಉದ್ಯಮಿ ಹಾಗೂ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಕಾಮನಹಳ್ಳಿ ತೀರ್ಥಾನಂದ (ಕೀರ್ತಿ ) ಅವರು ತಮ್ಮ ಕೀರ್ತಿ ಫಿಲಂಸ್ ಬ್ಯಾನರ್ನಡಿ ಕೈಗೊಂಡಿದ್ದಾರೆ. ಚಿತ್ರದ ತುಣುಕುಗಳನ್ನು ವೀಕ್ಷಿಸಿದ ನಿರ್ಮಾಪಕರು ಕಥೆಯ ನೈಜತೆ ಮತ್ತು ಮಕ್ಕಳ ಕಥಾವಸ್ತುವಿಗೆ ಮೆಚ್ಚಿ, ಯಾವುದೇ ಗುಣಮಟ್ಟದ ಕಾಂಪ್ರಮೈಸ್ ಮಾಡದೆ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ.
ಪ್ರಸ್ತುತ ಪೋಷಕ ನಟರು ಹಾಗೂ ಇತರೆ ಕಲಾವಿದರ ಡಬ್ಬಿಂಗ್ ಕಾರ್ಯ ನಡೆಯುತ್ತಿದ್ದು, ಪೋಷಕ ನಟ ಸಿದ್ದು ಮಂಡ್ಯ , ಪೋಷಕ ನಟಿ ಪೂಜಾ ರಘುನಂದನ್ ಅವರಿಂದ ಡಬ್ಬಿಂಗ್ ಆರಂಭಿಸಲಾಗಿದೆ. ವಿದ್ಯಾರ್ಥಿ ಕಲಾವಿದರ ಪರೀಕ್ಷೆಗಳು ಮುಗಿದ ಬಳಿಕ ಅವರ ಡಬ್ಬಿಂಗ್ ಕಾರ್ಯ ಕೈಗೊಳ್ಳಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಸುಮಾರು ಹತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಹೊಂದಿರುವ ನಿರ್ದೇಶಕ ಅರುಣ್ ಗೌಡ, ತಮ್ಮ ಮೊದಲ ಪ್ರಯತ್ನದಲ್ಲೇ ಮಕ್ಕಳ ಮನಸ್ಸಿಗೆ ಹತ್ತಿರವಾಗುವ ನೈಜ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಂಡ ನಂತರ ಮುಂದಿನ ನಾಲ್ಕು ತಿಂಗಳಲ್ಲಿ ಚಿತ್ರವನ್ನು ವಿವಿಧ ಚಿತ್ರೋತ್ಸವಗಳಿಗೆ ಕಳುಹಿಸಿ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ.
ಚಿತ್ರಕ್ಕೆ ಅಮೇರಿಕಾದಲ್ಲಿ ನೆಲೆಸಿರುವ ರಾಮ್ ಪ್ರಸಾದ್ ಮೂರು ಹಾಡುಗಳಿಗೆ ಸಂಗೀತ ನೀಡಿದ್ದು, ಸಂಕಲನವನ್ನು ಪುನೀತ್ ಕುಶಾವರ ನಿರ್ವಹಿಸಿದ್ದಾರೆ. ವಿಜಯ ಹಾಸನ್ ಸಂಭಾಷಣೆ ಬರೆದಿದ್ದು, ಚಂದು ಛಾಯಾಗ್ರಹಣ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಶರತ್ ಬಾಬು ಹಾಗೂ ಅರ್ಜುನ್ ಕ್ಷತ್ರಿಯ ಕಾರ್ಯನಿರ್ವಹಿಸಿದ್ದು, ಅನಿಲ್ ಸಹಾಯಕನಾಗಿ ಕೆಲಸ ಮಾಡಿದ್ದಾರೆ.
ಚಿತ್ರದಲ್ಲಿ ಕುಮಾರಿ ಶರಣ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸಿದ್ದು ಮಂಡ್ಯ, ಪೂಜಾ ರಘುನಂದನ್, ಕಲಾವಿದರಾದ ಲತಾಮಣಿ ಎಂ ಕೆ ತುರುವೇಕೆರೆ, ಡಾ. ಹಸೀನಾ ಎಚ್.ಕೆ., ಅಂಬಿಕಾ, ಗ್ಯಾರಂಟಿ ರಾಮಣ್ಣ, ಆಲೂರು ತಾಲ್ಲೂಕಿನ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ೨೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಿಶೇಷ ಪಾತ್ರದಲ್ಲಿ ಪಿ.ಜಿ.ಆರ್. ಸಿಂಧ್ಯಾ, ಆಲೂರು ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಸ್ಥಳೀಯ ಪ್ರತಿಭೆಗಳ ಭಾರಿ ಬಳಗವೇ ಈ ಚಿತ್ರಕ್ಕೆ ಬಲವಾಗಿದೆ.
“ಚಿತ್ರವನ್ನು ಯಾವುದೇ ಗುಣಮಟ್ಟದ ಕಾಂಪ್ರಮೈಸ್ ಇಲ್ಲದೆ ಅತ್ಯುತ್ತಮವಾಗಿ ಮೂಡಿಬರುವಂತೆ ಪ್ರಯತ್ನ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮೊದಲಿಗೆ ವಿವಿಧ ಚಲನಚಿತ್ರೋತ್ಸವಗಳಿಗೆ ಕಳುಹಿಸಿ ಬಳಿಕ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ.”
ಕಾಮನಹಳ್ಳಿ ತೀರ್ಥಾನಂದ (ಕೀರ್ತಿ ) (ನಿರ್ಮಾಪಕರು)
“ನಾನು ಬರೆದ ಊರಲ್ಲೇ ಚಿತ್ರೀಕರಣವಾಗಿದ್ದು, ವಿದ್ಯಾರ್ಥಿಗಳ ಅಭಿನಯ ಚಿತ್ರಕ್ಕೆ ನೈಜತೆ ತಂದಿದೆ. ನನ್ನ ಕೃತಿ ಸಿನಿಮಾರೂಪದಲ್ಲಿ ಮೂಡಿಬರುವುದು ಖುಷಿಯ ವಿಚಾರವಾಗಿದೆ .”
ಕೊಟ್ರೇಶ್ ಎಸ್. ಉಪ್ಪಾರ್ (ಸಾಹಿತಿ)
