ಸಕಲೇಶಪುರ, ಫೆ. 13: ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್ ಸುಪ್ರೀತಾ ಅವರ ನೇತೃತ್ವದಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ತಂಡ ದಾಳಿ ನಡೆಸಿ ಏಳು ಟಿಪ್ಪರ್ಗಳಷ್ಟು ಮರಳನ್ನು ವಶಪಡಿಸಿಕೊಂಡಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಶೇಖರಣೆ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದರು. ಹೆನ್ನಲಿ ಗ್ರಾಮದಲ್ಲಿ ಪರಿಶೀಲನೆ ನಡೆಸಿದ ವೇಳೆ ಸರ್ಕಾರದ ಅನುಮತಿ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಮರಳು ಸಂಗ್ರಹಿಸಿರುವುದು ಪತ್ತೆಯಾಯಿತು. ತಕ್ಷಣವೇ ಮರಳನ್ನು ವಶಕ್ಕೆ ಪಡೆದು ತಾಲ್ಲೂಕು ಕಚೇರಿ ಸಮೀಪಕ್ಕೆ ಸಾಗಿಸಿ ಸುರಿಯಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಸುಪ್ರೀತಾ, “ಸರ್ಕಾರದ ಅನುಮತಿ ಇಲ್ಲದೆ ಮರಳು ಶೇಖರಣೆ ಮಾಡುವುದು ಕಾನೂನುಬಾಹಿರ. ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.
ಅಕ್ರಮವಾಗಿ ಪಡೆದ ಮರಳನ್ನು ಬಳಸಿ ಕಟ್ಟಡ ಕಾಮಗಾರಿ ನಡೆಸುತ್ತಿರುವುದು ಕಂಡುಬಂದಲ್ಲಿ ಸಂಬಂಧಿಸಿದ ಕಟ್ಟಡ ಮಾಲೀಕರ ಮೇಲೆಯೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯಾಚರಣೆಯಲ್ಲಿ ನಗರ ಪೊಲೀಸ್ ಇನ್ಸ್ಪೆಕ್ಟರ್ ವನರಾಜು, ಕಂದಾಯ ನಿರೀಕ್ಷಕ ದಾನ್ ಪ್ರಕಾಶ್, ಗ್ರಾಮಾಧಿಕಾರಿ ಶಿಲ್ಪ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.
ತಾಲೂಕಿನಲ್ಲಿ ಅಕ್ರಮ ಮರಳು ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ಇಂತಹ ದಾಳಿಗಳನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
