ರಾಮನಾಥಪುರ: ಅರಳುವ ಮುನ್ನವೇ ಮರೆಯಾದ ಅಪರೂಪದ ಪ್ರತಿಭೆ, ನೀರಾವರಿ ಕ್ಷೇತ್ರದ ಜ್ಞಾನಿ ಹಾಗೂ ಸಂಸದೀಯ ಪಟು ಎಚ್.ಎನ್. ನಂಜೇಗೌಡರ ಕೊಡುಗೆ ಮತ್ತು ಇತಿಹಾಸವನ್ನು ಎಂದಿಗೂ ಮರೆಯಬಾರದು ಎಂದು ಶಾಸಕ ಹಾಗೂ ಮಾಜಿ ಸಚಿವ ಎ. ಮಂಜು ಹೇಳಿದರು.

ರಾಮನಾಥಪುರ ಹೋಬಳಿಯ ಗಂಗೂರು, ಜೆ. ಹೊಸಹಳ್ಳಿ ಹಾಗೂ ರುದ್ರಪಟ್ಟಣಕ್ಕೆ ತೆರಳುವ ಸರ್ಕಲ್ಗೆ ದಿವಂಗತ ಎಚ್.ಎನ್. ನಂಜೇಗೌಡರ ಹೆಸರಿನಲ್ಲಿ ನಾಮಕರಣ ಮಾಡಿ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಂಜೇಗೌಡರು ಮೂರು ಬಾರಿ ವಿಧಾನಸಭಾ ಸದಸ್ಯರಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ದೇವರಾಜ ಅರಸು ಅವರ ಆಡಳಿತಾವಧಿಯಲ್ಲಿ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, ನೀರಾವರಿ, ಕೃಷಿ ಹಾಗೂ ಕಾವೇರಿ ಜಲವಿವಾದದ ಕುರಿತು ಅಪಾರ ಜ್ಞಾನ ಹೊಂದಿದ್ದರು. ಯಾವುದೇ ವಿಚಾರವನ್ನು ಆಳವಾಗಿ ಅಧ್ಯಯನ ಮಾಡಿಯೇ ಮಾತನಾಡುತ್ತಿದ್ದ ಅವರು, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಅಂಕಿಅಂಶಗಳು ಹಾಗೂ ಐತಿಹಾಸಿಕ ದಾಖಲೆಗಳ ಆಧಾರದಲ್ಲಿ ವಿಷಯ ಮಂಡಿಸುತ್ತಿದ್ದರು ಎಂದು ಸ್ಮರಿಸಿದರು.

ನೇರ ನಡೆ-ನುಡಿ, ಅಧ್ಯಯನಶೀಲತೆ, ಜನಪರ ಕಾಳಜಿ ಮತ್ತು ಸ್ವಾಭಿಮಾನಕ್ಕೆ ಹೆಸರಾಗಿದ್ದ ನಂಜೇಗೌಡರು ತಮ್ಮದೇ ಪಕ್ಷದವರ ತಪ್ಪುಗಳನ್ನೂ ಪ್ರಶ್ನಿಸುವ ಧೈರ್ಯ ಹೊಂದಿದ್ದರು. ಅವರ ಸ್ಮರಣಾರ್ಥ ವೃತ್ತಗಳಿಗೆ ಹೆಸರಿಡುವುದಷ್ಟೇ ಅಲ್ಲದೆ, ಅವರ ನೀರಾವರಿ ಚಿಂತನೆಗಳು, ಸಂಸದೀಯ ಭಾಷಣಗಳು ಹಾಗೂ ಜ್ಞಾನಸಂಪತ್ತನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದು ಎ. ಮಂಜು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನಿರ್ದೇಶಕ ಡಾ. ಅಶೋಕ್ ಹನ್ಯಾಳ್, ಗಂಗೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಡಾ. ದಿಲೀಪ್, ಪಿಡಿಒ ಹೇಮಲತಾ, ವಿವಿಧ ಗ್ರಾಮಗಳ ಮುಖಂಡರು, ಶಿಕ್ಷಕರು, ಗ್ರಾಮಸ್ಥರು ಹಾಗೂ ಎಚ್.ಎನ್. ನಂಜೇಗೌಡರ ಅಭಿಮಾನಿಗಳು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
