ರಾಮನಾಥಪುರ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಮನೆಮನೆಗಳಲ್ಲಿ ವಿದ್ಯುತ್ ಬೆಳಕು ಹೊಳೆಯಲು ಕೆ.ಇ.ಬಿ. ಲೈನ್ಮನ್ಗಳ ಪರಿಶ್ರಮ ಮತ್ತು ಸೇವೆ ಅಪಾರವಾಗಿದ್ದು, ಬೆಳಕಿನ ಹಿಂದಿನ ಮಹಾಶಕ್ತಿಗಳಾದ ಎಲ್ಲಾ ಲೈನ್ಮನ್ಗಳಿಗೆ ಹಾರ್ದಿಕ ಶುಭಾಶಯಗಳು ಎಂದು ಲೇಖಕ ಶರಣು ಎಂ.ಎನ್. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಚಳಿ, ಮಳೆ, ಬಿಸಿಲು ಸೇರಿದಂತೆ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಜೀವದ ಹಂಗು ತೊರೆದು ವಿದ್ಯುತ್ ಕಂಬಗಳನ್ನು ಹತ್ತಿ ಕೆಲಸ ಮಾಡುವ ಲೈನ್ಮನ್ಗಳ ಸೇವೆ ಪ್ರಶಂಸನೀಯವಾಗಿದೆ ಎಂದು ಹೇಳಿದರು.
ಬೇಸಿಗೆ ಅಥವಾ ಅಕಾಲಿಕ ಮಳೆಯ ಸಂದರ್ಭದಲ್ಲಿ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತವಾದಾಗ, ಅದನ್ನು ಸರಿಪಡಿಸಲು ಲೈನ್ಮನ್ಗಳು ನಿರಂತರವಾಗಿ ಶ್ರಮಿಸುತ್ತಾರೆ. ಇದರಿಂದ ಮನೆಮನೆಗಳಿಗೆ ಮಾತ್ರವಲ್ಲದೆ ಕೃಷಿಕರ ಜಮೀನಿಗೂ ವಿದ್ಯುತ್ ಸರಬರಾಜು ಪುನಃ ಸ್ಥಾಪನೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೃಷಿಕರ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಪುನಃ ಸ್ಥಾಪನೆಯಾಗುವುದರಿಂದ ಹೊಲಗಳಲ್ಲಿ ನೀರು ಹರಿದು ಬೆಳೆಗಳ ರಕ್ಷಣೆಯಾಗುತ್ತದೆ. ವಿದ್ಯುತ್ ಎಂಬ ಅಗೋಚರ ಶಕ್ತಿಯನ್ನು ನಿಯಂತ್ರಿಸಿ ಜನಜೀವನ ಸುಗಮವಾಗಿಸಲು ಲೈನ್ಮನ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಬದಿಯ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಾಗದಂತೆ ಕಾಲಕಾಲಕ್ಕೆ ಕತ್ತರಿಸಿ ಹಸಿರೀಕರಣಕ್ಕೂ ಸಹಕಾರ ನೀಡುತ್ತಿರುವುದು ಲೈನ್ಮನ್ಗಳ ಮತ್ತೊಂದು ಪ್ರಮುಖ ಸೇವೆಯಾಗಿದೆ ಎಂದು ಹೇಳಿದರು.
ಒಟ್ಟಾರೆ, ಮನೆಮನೆಗಳಿಗೆ ಬೆಳಕು ನೀಡುವ ಈ ಲೈನ್ಮನ್ಗಳು ಸಮಾಜದ ಆಪದ್ಭಾಂಧವರಾಗಿದ್ದು, ಅವರ ಪರಿಶ್ರಮದಿಂದಲೇ ಊರು ಮತ್ತು ನಾಡು ಬೆಳಗುತ್ತಿದೆ ಎಂದು ಶರಣು ಎಂ.ಎನ್. ಕುಮಾರಸ್ವಾಮಿ ಹೇಳಿದ್ದಾರೆ.
