ರಾಮನಾಥಪುರ: ಹಾಸನ ಜಿಲ್ಲೆಯ ರಾಮನಾಥಪುರದಲ್ಲಿರುವ ಕಾವೇರಿ ನದಿ ದಂಡೆಯ ಅಶ್ವತ್ ಕಟ್ಟೆಯ ಮೇಲಿರುವ ನಾಗರಕಲ್ಲು ಬಳಿ ಕೆಲವು ಭಕ್ತರು ಉಪ್ಪು, ತುಪ್ಪ, ಹಾಲು, ಮೊಸರು ಸೇರಿದಂತೆ ವಿವಿಧ ಪದಾರ್ಥಗಳನ್ನು ಅರ್ಪಣೆ ಮಾಡುವ ನೆಪದಲ್ಲಿ ಹಾಕಿ ಹೋಗಿರುವ ಪರಿಣಾಮ ಸ್ಥಳದಲ್ಲಿ ತೀವ್ರ ದುರ್ವಾಸನೆ ಉಂಟಾಗಿತ್ತು.

ಈ ಹಿನ್ನೆಲೆ ಇಂದು ಸೋಮವಾರ ಸಂಜೆ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಸದಸ್ಯರು ಸ್ಥಳಕ್ಕೆ ಆಗಮಿಸಿ ಸ್ವಚ್ಚತಾ ಕಾರ್ಯ ನಡೆಸಿದರು. ನಾಗರಕಲ್ಲು ಸುತ್ತಮುತ್ತ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ಪರಿಸರ ಸ್ವಚ್ಛತೆಗೆ ಕ್ರಮ ಕೈಗೊಂಡರು.

ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಆಹಾರ ಪದಾರ್ಥಗಳು ಹಾಗೂ ತ್ಯಾಜ್ಯಗಳನ್ನು ನದಿ ತೀರದಲ್ಲಿ ಹಾಕುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಭಕ್ತರು ಪರಿಸರದ ಬಗ್ಗೆ ಜಾಗೃತಿ ಹೊಂದಿ ನದಿ ಪ್ರದೇಶವನ್ನು ಕಲುಷಿತಗೊಳಿಸದಂತೆ ನಡೆದುಕೊಳ್ಳಬೇಕು ಎಂದು ಸಮಿತಿಯವರು ಮನವಿ ಮಾಡಿದರು.
ಕಾವೇರಿ ನದಿ ದಂಡೆಯಂತಹ ಪವಿತ್ರ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಅವರು ತಿಳಿಸಿದರು.
ವರದಿ: ಕುಮಾರಸ್ವಾಮಿ
