ರಾಮನಾಥಪುರ, ಮಾ.27: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರದ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದಲ್ಲಿ ಶುಕ್ರವಾರದಿಂದ ಆರಂಭವಾದ 10 ದಿನಗಳ ಶ್ರೀರಾಮನವಮಿ ಸಂಗೀತೋತ್ಸವ ಕಾರ್ಯಕ್ರಮದ ಪ್ರಥಮ ದಿನ ಭಕ್ತಿಭಾವದ ವಾತಾವರಣ ನಿರ್ಮಾಣವಾಯಿತು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಶ್ರೀರಾಮ ಸೇವಾ ಸಮಿತಿ ಸದಸ್ಯ ಎಸ್. ಶ್ರೀನಿವಾಸ್, “ಶ್ರೀರಾಮನು ಮಾನವನಾಗಿ ಹುಟ್ಟಿ, ಮಾನವ ಜೀವನದ ಎಲ್ಲ ಮೌಲ್ಯಗಳನ್ನು ಪಾಲಿಸಿ ಧರ್ಮವನ್ನು ಕಾಪಾಡಿದ ಆದರ್ಶಪುರುಷ. ರಾಮನವಮಿ ಕೇವಲ ಹಬ್ಬವಲ್ಲ, ಅದು ಧರ್ಮ, ಸತ್ಯ, ನಿಷ್ಠೆ ಹಾಗೂ ಆದರ್ಶ ಜೀವನದ ದಿವ್ಯೋತ್ಸವ” ಎಂದು ಹೇಳಿದರು.

ಅವರು ಮುಂದುವರಿದು, “ಶ್ರೀರಾಮನ ಜೀವನವು ಸತ್ಯ, ಧರ್ಮ ಮತ್ತು ಆದರ್ಶಗಳ ಪ್ರತೀಕವಾಗಿದೆ. ಈ ಪವಿತ್ರ ದಿನಗಳಲ್ಲಿ ನಾವು ನಮ್ಮ ಜೀವನವನ್ನು ಪರಿಷ್ಕರಿಸಿಕೊಂಡು ಧರ್ಮದ ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಬೇಕು. ಅವರ ತತ್ವ ಮತ್ತು ಆದರ್ಶಗಳನ್ನು ಅನುಸರಿಸುವ ಮೂಲಕ ಜೀವನವನ್ನು ಉನ್ನತಿಗೇರಿಸಬಹುದು” ಎಂದು ತಿಳಿಸಿದರು.
ಸಂಗೀತೋತ್ಸವದ ಮೊದಲ ದಿನ ವಿದುಷಿ ಮಾಧುರಿ ಕೌಶಿಕ್ ಅವರ ಗಾಯನ, ವಿ. ಕೃತಿಕ್ ಕೌಶಿಕ್ ಅವರ ಪಿಟೀಲು, ವಿ. ಕೌಶಿಕ್ ಶ್ರೀಧರ್ ಅವರ ಮೃದಂಗ ಹಾಗೂ ವಿ. ಶಮಿತ್ ಜಿ. ಅವರ ಘಟಂ ವಾದನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು.

ಈ ಸಂದರ್ಭದಲ್ಲಿ ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಅರ್.ಅರ್. ಶ್ರೀನಿವಾಸ್, ಸದಸ್ಯರಾದ ಭದರೀನಾಥ್, ಅರ್.ಎಸ್. ನರಸಿಂಹಮೂರ್ತಿ, ತಿರುಮಲಚಾರ್, ಎಂ.ಎನ್. ಶ್ರೀನಿವಾಸ್, ಮೋಹನ್, ಅರ್.ಎಸ್. ದಿಲೀಫ್ ಸೇರಿದಂತೆ ಹಲವು ಭಕ್ತರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
— ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
