ರಾಮನಾಥಪುರ- ಹೊನ್ನೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಅಡ್ವೊಕೇಟ್ ಶ್ರೀ ಚೆಲುವರಾಜು ಹಾಗೂ ಶ್ರೀಮತಿ ರೂಪಾ ಅವರು ಧ್ವನಿವ್ಯವಸ್ಥೆ (ಸ್ಪೀಕರ್) ಯನ್ನು ದೇಣಿಗೆಯಾಗಿ ನೀಡಿದರು.

ರಾಮನಾಥಪುರ ಹೋಬಳಿ ಹೊನ್ನನಹಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಲೋಕೇಶ್ ಮಾತನಾಡಿ, ದಾನಿಗಳ ಸಮಾಜಮುಖಿ ಚಿಂತನೆ ಶ್ಲಾಘನೀಯವಾಗಿದ್ದು, ಇಂತಹ ಸಹಕಾರಗಳು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತವೆ ಎಂದು ತಿಳಿಸಿದರು.

ಬಸವನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮಂಜುನಾಥ್ ಅವರು ದಾನಿಗಳ ಸೇವಾಭಾವವನ್ನು ಪ್ರಶಂಸಿಸಿ, ಶಾಲೆಯ ಮೂಲಸೌಕರ್ಯ ವೃದ್ಧಿಗೆ ಗ್ರಾಮಸ್ಥರ ಸಹಕಾರ ಅತ್ಯಂತ ಅಗತ್ಯವೆಂದು ಹೇಳಿದರು. ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕೃಷ್ಣಗೌಡರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ದಾನಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ, ಕಳೆದ ಒಂದು ವರ್ಷದಿಂದ ಹೊನ್ನೇನಹಳ್ಳಿ ಶಾಲೆಯ ಅಭಿವೃದ್ಧಿಗೆ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿರುವ ಅರಕಲಗೂಡು ತಾಲೂಕಿನ ನಿಕಟಪೂರ್ವ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅಶೋಕ್ ಹನ್ಯಾಳ್ ರವರ ಸೇವೆಯನ್ನು ಸ್ಮರಿಸಲಾಯಿತು. ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಹಕಾರವನ್ನೂ ಶಾಲಾ ವತಿಯಿಂದ ಕೃತಜ್ಞತೆಯಿಂದ ಗೌರವಿಸಲಾಯಿತು.
ಗ್ರಾಮೀಣ ಶಿಕ್ಷಣದ ಅಭಿವೃದ್ಧಿಗೆ ಸಮಾಜದ ಪಾಲ್ಗೊಳ್ಳುವಿಕೆ ಮಹತ್ವದ್ದೆಂದು ಅಭಿಪ್ರಾಯ ವ್ಯಕ್ತವಾಯಿತು.
ವರದಿ : ಎಂ.ಎನ್. ಕುಮಾರಸ್ವಾಮಿ, ಲೇಖಕರು, ರಾಮನಾಥಪುರ. ಹಾಸನ ಜಿಲ್ಲೆ.
