ಹಾಸನ, ಮಾ.30: ಹಾಸನ ನಗರದ ಬೇಲೂರು ರಸ್ತೆ ವಿಜಯನಗರ ಬಡಾವಣೆ, ಆದಾಯ ತೆರಿಗೆ ಕಚೇರಿ ಸಮೀಪ ಜೈ ಮಾರುತಿ ಕೃಪಾ ಪೋಷಿತ ನಾಟಕ ಮಂಡಳಿಯ ವತಿಯಿಂದ ಭಾನುವಾರ ರಾತ್ರಿ ನಡೆದ ‘ಸಂಪೂರ್ಣ ರಾಮಾಯಣ’ ನಾಟಕ ಪ್ರದರ್ಶನವು ಸಾವಿರಾರು ಪ್ರೇಕ್ಷಕರ ಮನಗೆದ್ದಿತು.
ಹಾಸನದ ಯುವ ನಿರ್ದೇಶಕ ಹೇಮಂತ್ ದೇವರಾಜ ಆಚಾರ್ಯ ಅವರ ನಿರ್ದೇಶನದಲ್ಲಿ, ದೊಡ್ಡಮಂಡಿಗನಹಳ್ಳಿ ಎಂ.ಸಿ. ಶ್ರೀನಿವಾಸ್ ಅವರ ಸಾರಥ್ಯದಲ್ಲಿ, ಜಿಲ್ಲಾ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದರಾದ ಜವರೇಗೌಡ ಮತ್ತು ತೇಜೂರು ಸೋಮಣ್ಣ ಅವರ ನೇತೃತ್ವದಲ್ಲಿ ಈ ನಾಟಕ ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಹಾಸನ ನಗರ ಹಾಗೂ ಸುತ್ತಮುತ್ತಲಿನ ಅನುಭವಿ ಕಲಾವಿದರು ನಾಟಕದಲ್ಲಿ ಭಾಗವಹಿಸಿ ರಂಗಭೂಮಿಗೆ ಜೀವ ತುಂಬಿದರು.
ಪ್ರೇಕ್ಷಕರ ಅಪಾರ ಸ್ಪಂದನೆ
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಕಲಾವಿದರು, ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಗೊರೂರು ಅನಂತರಾಜು, “ಈ ಭಾಗದಲ್ಲಿ ನಾಟಕ ವೀಕ್ಷಿಸಲು ಇಷ್ಟೊಂದು ಪ್ರಮಾಣದಲ್ಲಿ ಪ್ರೇಕ್ಷಕರು ಸೇರಿರುವುದೇ ಕಲಾವಿದರಿಗೆ ಅಪಾರ ಸಂತೋಷದ ವಿಷಯ. ಬೆಳ್ಳಾವೆ ನರಹರಿಶಾಸ್ತ್ರಿಗಳ ‘ರಾಮಾಯಣ’ ಹಾಗೂ ಬಿ. ಪುಟ್ಟಸ್ವಾಮಯ್ಯ ಅವರ ‘ಕುರುಕ್ಷೇತ್ರ’ ನಾಟಕಗಳು ಕಂಪನಿ ನಾಟಕಗಳ ಕಾಲದಿಂದಲೇ ಜನಪ್ರಿಯತೆಯನ್ನು ಗಳಿಸಿದ್ದು, ಇಂದಿಗೂ ಜನಮಾನಸದಲ್ಲಿ ಗಟ್ಟಿಯಾಗಿ ಬೇರುಬಿಟ್ಟಿವೆ” ಎಂದು ಹೇಳಿದರು.
“ಕಲಾವಿದರು ಎಷ್ಟೇ ಬಾರಿ ಒಂದೇ ಪಾತ್ರವನ್ನು ನಿರ್ವಹಿಸಿದರೂ ಉತ್ಸಾಹ ಕಳೆದುಕೊಳ್ಳದೆ ಅಭಿನಯಿಸುತ್ತಾ ಬಂದಿದ್ದಾರೆ. ಪ್ರೇಕ್ಷಕರ ಮೆಚ್ಚುಗೆಯ ನಾಲ್ಕು ಮಾತುಗಳೇ ಕಲಾವಿದರಿಗೆ ನಿಜವಾದ ಚೈತನ್ಯ ಮತ್ತು ಸ್ಫೂರ್ತಿ” ಎಂದು ಅವರು ಅಭಿಪ್ರಾಯಪಟ್ಟರು.

ಗಣ್ಯರ ಉಪಸ್ಥಿತಿ
ಹಿರಿಯ ಕಲಾವಿದರಾದ ಎಂ.ಸಿ. ರಾಜು ಡಿ.ಎಂ.ಹಳ್ಳಿ, ಲಕ್ಷ್ಮೀಕಾಂತ್, ಸಮಾಜಸೇವಕರಾದ ಕಂಚಮಾರನಹಳ್ಳಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಬಾಲಕೃಷ್ಣ ಎತ್ತಿನಕಟ್ಟೆ, ಜೆಸಿಬಿ ಮಾಲೀಕರಾದ ಪಾಪಣ್ಣ, ಹರೀಶ್, ರಘುನಂದನ್, ಬಾಲು, ಭಾಗ್ಯ ನಾಗರಾಜು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಡಿ.ಎಸ್. ಕುಮಾರ್, ಅರುಣ್ ಕುಮಾರ್, ಯೋಗೇಶ್, ಕದಂಬ ಸೇನೆ ಹಾಸನ ಜಿಲ್ಲಾಧ್ಯಕ್ಷ ಎ.ಹೆಚ್. ಗಣೇಶ್ ಅಂಕಪುರ, ಕಲಾವಿದರಾದ ಡಿ.ಎಸ್. ನಾಗಮೋಹನ್, ಪಿ.ಎಂ. ಮಲ್ಲೇಶಗೌಡ, ನಿವೃತ್ತ ಪೊಲೀಸ್ ರಂಗಸ್ವಾಮಿ, ಪ್ರಭಾಕರ್ ಸಿದ್ದಯ್ಯನಗರ, ಮಂಜೇಗೌಡ ಯರೇಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಾವಿದರ ಅದ್ಭುತ ಅಭಿನಯ
ನಾಟಕದಲ್ಲಿ ಡಿ. ವಾಸುದೇವ್ ನವಿಲಹಳ್ಳಿ ಅವರು ದಶರಥ, ತೇಜೂರು ಸೋಮಣ್ಣ ಅವರು ಶ್ರೀರಾಮ, ಎಂ.ಸಿ. ಶ್ರೀನಿವಾಸ್ ಡಿ.ಎಂ.ಹಳ್ಳಿ ಅವರು ಭರತ, ಜವರೇಗೌಡ ಅವರು ರಾವಣ, ಹನುಮೇಗೌಡ ಬಾರೇ ಹೊಸೂರು ಅವರು ಅಂಜನೇಯ ಪಾತ್ರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಇದಲ್ಲದೆ,
- ಲಕ್ಷ್ಮಣ – ಮಂಜುನಾಥ್ ಅಡಿಬೈಲು
- ಕುಂಭಕರ್ಣ – ಶಿವಣ್ಣ ನಲ್ಲೂರು
- ವಿಭೀಷಣ – ರಂಗಸ್ವಾಮಿ ಕಿರಗಡಲು
- ಸುಮಂತ್ರ – ಬ್ಯಾಟಾಚಾರ್
- ವಾಲಿ, ಸುಗ್ರೀವ – ಹಾಲವಾಗಿಲು ಅಭಿಷೇಕ್, ಹರ್ಷ
- ಮಾರೀಚ – ರಂಗಸ್ವಾಮಿ
- ಗುಹ – ದೇವರಾಜು ಅಂಚಿಹಳ್ಳಿ
- ಪ್ರಹಸ್ತ – ಸೋಮಣ್ಣ ಸಾಣೇನಹಳ್ಳಿ
- ಜಾಂಬವಂತ – ಬೆಂಡೆ ಮಂಜಣ್ಣ
- ಶೂರ್ಪಣಖಿ – ವೆಂಕಟೇಶ್ ಕುರಿಕಾವಲು
- ಮಂಥರೆ – ಯೋಗೇಶ್
- ಶತ್ರುಘ್ನ – ಜೀವನ್ ಹೆಮ್ಗೆ
ಹಾಗೂ ಇತರ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿ ನಾಟಕವನ್ನು ಯಶಸ್ವಿಗೊಳಿಸಿದರು.

ರಂಗಭೂಮಿಗೆ ಹೊಸ ಚೈತನ್ಯ
ಹಾಸನ ನಗರದಲ್ಲಿ ಸಾಂಪ್ರದಾಯಿಕ ಪೌರಾಣಿಕ ನಾಟಕಗಳಿಗೆ ಇನ್ನೂ ಅಪಾರ ಪ್ರೇಕ್ಷಕ ವಲಯವಿದೆ ಎಂಬುದನ್ನು ಈ ‘ಸಂಪೂರ್ಣ ರಾಮಾಯಣ’ ನಾಟಕ ಮತ್ತೊಮ್ಮೆ ಸಾಬೀತುಪಡಿಸಿದ್ದು, ರಂಗಭೂಮಿ ಪರಂಪರೆಗೆ ಹೊಸ ಚೈತನ್ಯ ತುಂಬಿದಂತಾಯಿತು.
ವರದಿ – ಗೊರೂರು ಅನಂತರಾಜು.
