ರಾಮನಾಥಪುರ, ಮಾ.31: ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆಯುತ್ತಿರುವ ಸಂಗೀತೋತ್ಸವದ 5ನೇ ದಿನದ ಕಾರ್ಯಕ್ರಮದಲ್ಲಿ ಬಸವಪಟ್ಟಣದ ವಿದ್ವಾನ್ ಬಿ.ಎಸ್. ಮುರಳಿ ಅವರು ನೀಡಿದ “ತ್ಯಾಗರಾಜ ದರ್ಶನ” ಹಾಡುಗಾರಿಕೆ ಭಕ್ತರನ್ನು ಭಕ್ತಿ ಪರವಶರನ್ನಾಗಿಸಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ವಾನ್ ಬಿ.ಎಸ್. ಮುರಳಿ ಅವರು, ಮಾನವ ಜನ್ಮ ದೊಡ್ಡದು. ಮನುಷ್ಯನು ತನ್ನ ಬದುಕಿನ ಮೋಕ್ಷ ಸಾಧನೆಗಾಗಿ ಭಕ್ತಿಯಿಂದ ದೇವರ ಪೂಜಾ ಕೈಂಕರ್ಯಗಳಲ್ಲಿ ತೊಡಗಿಕೊಳ್ಳುವುದು ನಿಜವಾದ ಭಕ್ತಿ ಮಾರ್ಗವಾಗಿದೆ ಎಂದು ತಿಳಿಸಿದರು.

ನಮ್ಮ ಸನಾತನ ಧರ್ಮದಲ್ಲಿ ಬಂದಿರುವ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಹಿರಿಯರು ನಮಗೆ ಅಮೂಲ್ಯವಾಗಿ ನೀಡಿದ್ದಾರೆ. ಇಂತಹ ಮೌಲ್ಯಯುತ ಸಂಗೀತ ಪರಂಪರೆಯನ್ನು ಅಳವಡಿಸಿಕೊಂಡು ನಡೆದಾಗ ಮಾತ್ರ ಹಿರಿಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಇಂದಿನ ಯುವಪೀಳಿಗೆ ಸಂಗೀತವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡು ಸಾಗಬೇಕು. ಪ್ರತಿಯೊಬ್ಬ ಭಕ್ತರೂ ಇಂತಹ ಭಕ್ತಿಮಯ ಸಂಗೀತವನ್ನು ಆಲಿಸಿ, ಪಾಲಿಸಿಕೊಂಡು ಹೋಗಬೇಕು ಎಂದು ಅವರು ಕರೆ ನೀಡಿದರು. ಇದೇ ವೇಳೆ “ಬಸವಣ್ಣನವರು ದಯೇ ಧರ್ಮದ ಮೂಲವಯ್ಯ ಎಂದಿದ್ದಾರೆ” ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಬಿ.ಎಸ್. ಮುರಳಿ ಅವರು ನೀಡಿದ ತ್ಯಾಗರಾಜ ದರ್ಶನ ಹಾಡುಗಾರಿಕೆ ಭಕ್ತರಲ್ಲಿ ಅಪಾರ ಭಕ್ತಿ ಭಾವ ಮೂಡಿಸಿತು.
ಈ ಸಂದರ್ಭದಲ್ಲಿ ರಾಮನಾಥಪುರದ ದಿ. ಸುಬ್ಬರಾಯರ ಮಕ್ಕಳು, ರಾ.ಸು. ನಾಗರಾಜು ಹಾಗೂ ಸಹೋದರರು, ಕೀ.ಶೇ. ಎಂ.ಎಸ್. ಜನಾರ್ದನ ಅಯ್ಯಂಗಾರ್ಯರ ಮಕ್ಕಳು, ಮಲ್ಲರಾಜಪಟ್ಟಣ ವೆಂಕಟೇಶ್ ಹಾಗೂ ಸಹೋದರರು ಕಾರ್ಯಕ್ರಮ ಮತ್ತು ದಾಸೋಹದ ವ್ಯವಸ್ಥೆ ಮಾಡಿದ್ದರು.
ದೇವಾಲಯದ ಮುಖ್ಯ ಅರ್ಚಕರಾದ ಶ್ರೀನಿವಾಸ ಭಟ್ಟರು ಇಂದಿನ ಪೂಜಾ ಕೈಂಕರ್ಯ ನೆರವೇರಿಸಿದರು.
– ಕುಮಾರಸ್ವಾಮಿ ಎಂ.ಎನ್.
