ಚನ್ನರಾಯಪಟ್ಟಣ: ಚನ್ನರಾಯಪಟ್ಟಣದ ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿ ರಥಸಪ್ತಮಿ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೂರ್ಯ ದೇವರ ಮಹತ್ವ, ರಥಸಪ್ತಮಿಯ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರಕಾಶ್ ಮಾತನಾಡಿ, ರಥಸಪ್ತಮಿಯು ಸೂರ್ಯ ದೇವರ ಜನ್ಮದಿನವಾಗಿದ್ದು, ಮನುಕುಲಕ್ಕೆ ಶಕ್ತಿ ಹಾಗೂ ಆರೋಗ್ಯ ನೀಡುವ ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ ಎಂದರು. ಈ ದಿನ ಸೂರ್ಯ ದೇವರು ಏಳು ಕುದುರೆಗಳಿರುವ ರಥವನ್ನು ಏರಿ ಜಗತ್ತಿಗೆ ಬೆಳಕನ್ನು ನೀಡಲು ಬಂದ ದಿನವೆಂದು ನಂಬಲಾಗಿದೆ. ಸೂರ್ಯನಿಗೆ ಗೌರವ ಸೂಚಿಸುವುದಕ್ಕಾಗಿ ಸೂರ್ಯ ನಮಸ್ಕಾರ ಮಾಡುವ ಪದ್ಧತಿ ಇದೆ ಎಂದು ವಿವರಿಸಿದರು.
ಮುಖ್ಯಶಿಕ್ಷಕರಾದ ಸುರೇಶ್ ಮಾತನಾಡಿ, ರಥಸಪ್ತಮಿ ದಿನ 108 ಸೂರ್ಯ ನಮಸ್ಕಾರಗಳನ್ನು ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಮನಸ್ಸು ಶಾಂತಗೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಯೋಗ ಶಿಕ್ಷಕಿಯಾದ ರೇಖಾರಾಣಿ ಮಾತನಾಡಿ, ರಥಸಪ್ತಮಿ ಚಳಿಗಾಲದಿಂದ ವಸಂತ ಋತುವಿನ ಕಡೆಗೆ ಸೂರ್ಯನ ಪಥ ಬದಲಾವಣೆಯನ್ನು ಸೂಚಿಸುತ್ತದೆ. ಇದು ಕೃಷಿ ಚಟುವಟಿಕೆಗಳಿಗೆ ಹೊಸ ಉತ್ಸಾಹವನ್ನು ನೀಡುತ್ತದೆ ಎಂದರು. ಈ ದಿನ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಸೂರ್ಯ ನಮಸ್ಕಾರ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು. ದೇಹದ ತೂಕ ಇಳಿಕೆ, ರಕ್ತ ಪರಿಚಲನೆ ಸುಧಾರಣೆ, ಹೃದಯದ ಆರೋಗ್ಯ ವೃದ್ಧಿ, ಒತ್ತಡ ನಿವಾರಣೆ, ಸ್ನಾಯು ಬಲವರ್ಧನೆ, ನಮ್ಯತೆ ಹೆಚ್ಚಳ, ಜೀರ್ಣಕ್ರಿಯೆ ಸುಧಾರಣೆ ಹಾಗೂ ಶ್ವಾಸಕೋಶದ ಆರೋಗ್ಯಕ್ಕೆ ಇದು ಸಹಾಯಕವಾಗಿದೆ ಎಂದು ವಿವರಿಸಿದರು. ಜೊತೆಗೆ ಥೈರಾಯ್ಡ್ ಸೇರಿದಂತೆ ಇತರ ಅಂತಃಸ್ರಾವಕ ಗ್ರಂಥಿಗಳನ್ನು ಉತ್ತೇಜಿಸುವ ಮೂಲಕ ಹಾರ್ಮೋನುಗಳ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದರು.

ರಥಸಪ್ತಮಿ ದಿನ ನದಿಯಲ್ಲಿ ಅಥವಾ ಮನೆಯಲ್ಲಿ ತಲೆಯ ಮೇಲೆ ಎಕ್ಕದೆಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡಿ ಸೂರ್ಯ ನಮಸ್ಕಾರ ಮಾಡುವುದರಿಂದ ಕೀಲುನೋವುಗಳು ನಿವಾರಣೆಯಾಗುತ್ತವೆ ಎಂದ ಅವರು, ಸೂರ್ಯ ನಮಸ್ಕಾರ ಕೇವಲ ಯೋಗಾಸನವಲ್ಲ, ಅದು ದೈಹಿಕ ಶಕ್ತಿ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಸಮತೋಲನಗೊಳಿಸುವ ಪವಿತ್ರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು. ಸೂರ್ಯನು ಹಳೆಯ ರಥವನ್ನು ಬಿಟ್ಟು ಹೊಸ ರಥವನ್ನು ಏರುವಂತೆ, ನಾವು ಕೂಡ ಹಳೆಯ ಆಲೋಚನೆಗಳು, ಕೋಪತಾಪಗಳನ್ನು ತೊರೆದು ಹೊಸ ಚಿಂತನೆಗಳೊಂದಿಗೆ ಜೀವನದ ಹೊಸ ಮಾರ್ಗದಲ್ಲಿ ಸಾಗಬೇಕು ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳೊಂದಿಗೆ ಎಲ್ಲಾ ಶಿಕ್ಷಕರು ಸೇರಿ 108 ಸೂರ್ಯ ನಮಸ್ಕಾರಗಳನ್ನು ನೆರವೇರಿಸಿದರು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕುಮಾರಿ ಕನುಪ್ರಿಯ ಅವರು ವಿಶೇಷ ಯೋಗ ಭಂಗಿಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪಿಎಂಶ್ರೀ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಲೇಖನ ಅವರು ವಿಶೇಷ ಸೂರ್ಯ ನಮಸ್ಕಾರ ಭಂಗಿಗಳ ಪ್ರದರ್ಶನ ನೀಡಿ, ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ವಿಷಯದಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಪ್ರೇಮ, ಪದ್ಮಿನಿ, ಸುಮಾ, ಅನುಕುಮಾರಿ, ಮಹೇಶ್, ವಿಜಯಕುಮಾರ್, ಚೂಡಾಮಣಿ, ಪೂರ್ಣಿಮಾ ಸೇರಿದಂತೆ ಇತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಮಂಜುನಾಥ್ ಐ ಕೆ
