ಚನ್ನರಾಯಪಟ್ಟಣ, ಮೇ 14: ತಾಲೂಕು ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿಗಳ ಕುಮ್ಮಕ್ಕಿದೆ ಎಂಬ ಗಂಭೀರ ಆರೋಪವನ್ನು ದಲಿತ ಮುಖಂಡ ಸಿ.ಎನ್. ಮಂಜುನಾಥ್ ಅವರು ಮಾಡಿದ್ದು, “ನಿಜವಾದ ಸಮಸ್ಯೆಗಳನ್ನು ಬದಿಗೊತ್ತಿ, ವೈಯುಕ್ತಿಕ ಹಿತಾಸಕ್ತಿಗೆ ಜನರನ್ನು ಬಳಕೆ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕಛೇರಿಯ ಎಡಬಾಗದ ಗೇಟಿನಲ್ಲಿ ಅಧಿಕಾರಪಕ್ಷದ ಪರ ಘೋಷಣೆ ಕೂಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜುನಾಥ್, “ರಾಮನಗರದ ಹಳೆಯ ಆಡಿಯೋವನ್ನು ದುರುಪಯೋಗ ಮಾಡಿಕೊಂಡು ಬ್ಲಾಕ್ಮೇಲ್ ಮಾಡುತ್ತಿರುವುದು ನಿಂದನೀಯ. ನಮ್ಮ ಜಿಲ್ಲೆಯ ರೈತರು ಲಂಚ ನೀಡಿದ ಅಥವಾ ಲಂಚ ಕೇಳಿದ ದೃಶ್ಯಾವಳಿಗಳು ಇದ್ದರೆ ಬಹಿರಂಗಪಡಿಸಲಿ, ನಾವು ಸಹ ಒತ್ತಾಯಿಸುತ್ತೇವೆ,” ಎಂದು ಸವಾಲು ಹಾಕಿದರು.

ಅಲ್ಲದೇ, ಗುಲಸಿಂದ ಮಹೇಶ್ ಎಂಬುವವರು ಕೋಟ್ಯಾಂತರ ಆಸ್ತಿ ಮೇಲಿನ ದುರಸ್ತಿಗೆ ತಹಶೀಲ್ದಾರರ ಮೇಲೆ ಒತ್ತಡ ಹಾಕುತ್ತಿರುವುದಾಗಿ ಆರೋಪಿಸಿ, “ಅವರ ಜಮೀನಿಗೆ ಸಂಬಂಧಿಸಿದಂತೆ ಕೆಲಸ ಕೈಗೆತ್ತಿಕೊಳ್ಳದ ಕಾರಣಕ್ಕಾಗಿ ಕೆಲವುವರು ತಾಲೂಕು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಧರಣಿ ನಡೆಸುತ್ತಿದ್ದಾರೆ. ಇದು ವೈಯುಕ್ತಿಕ ಅGENDAಗಾಗಿ ನಡೆಯುತ್ತಿರುವ ಆಂದೋಲನವಾಗಿದೆ,” ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ದಂಡೋರ ಮಂಜುನಾಥ್, ಕೆಂಪೇಗೌಡ ವೇದಿಕೆ ರಾಜ್ಯಾಧ್ಯಕ್ಷ ಆನಂದ್ ಕಾಳೆನಹಳ್ಳಿ, ಮಾಜಿ ಪಂಚಾಯತಿ ಅಧ್ಯಕ್ಷ ಶ್ರವಣಬೆಳಗೊಳ ಲಕ್ಷ್ಮಣ್, ನೇರಳಕೆರೆ ವಿಶ್ವನಾಥ್, ವಿರೂಪಾಕ್ಷಪುರ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
