
ತುಮಕೂರು : ತುಮಕೂರು ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹಿಂದೆ 2024 ರ ಮೇ 1 ರಂದು ಅಂತಿಮ ದಿನಾಂಕವನ್ನು ನಿಗಧಿಗೊಳಿಸಿ ಅರ್ಜಿ ಆಹ್ವಾನಿಸಲಾಗಿತ್ತು. ನಿಗಧಿತ ದಿನಾಂಕದೊಳಗೆ ಅರ್ಜಿಗಳು ಸ್ವೀಕೃತವಾಗದ ಕಾರಣ ಮತ್ತೊಮ್ಮೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ದಲಿತಪರ/ ಹಿಂದುಳಿದ ಪರ ಸಂಘಟನೆಗಳಲ್ಲಿ ಜನಾಂಗದ ಪರವಾಗಿ ನಿಷ್ಪಕ್ಷಪಾತವಾಗಿ ಶ್ರಮಿಸಿರುವ ಜಿಲ್ಲೆಯ ಆಸಕ್ತ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಇತರೆ ವರ್ಗದ ಎನ್.ಜಿ.ಒ ಸಂಸ್ಥೆಗಳ ಪ್ರತಿನಿಧಿಗಳು ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಕಚೇರಿ, ಬಿ.ಹೆಚ್. ರಸ್ತೆ, ತುಮಕೂರು ತಾಲ್ಲೂಕು ಇವರಿಗೆ ಮಾರ್ಚ್ 20ರೊಳಗಾಗಿ ಸಲ್ಲಿಸಬಹುದಾಗಿದೆ.
ಅರ್ಜಿ ಹಾಗೂ ಮತ್ತಿತರೆ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ತುಮಕೂರು ತಾಲ್ಲೂಕು ಅಥವಾ ದೂ.ವಾ.ಸಂ. 0816-20063051 ನ್ನು ಸಂಪರ್ಕಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ಈ ಹಿಂದೆ ಅಥವಾ ಪ್ರಸ್ತುತ ಜಿಲ್ಲಾ/ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗಳಲ್ಲಿ ಸದಸ್ಯರಾಗಿರಕೂಡದು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಯಾವುದೇ ಸಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬಾರದು. ಚುನಾಯಿತ ಪ್ರತಿನಿಧಿಯಾಗಿರಬಾರದು ಹಾಗೂ ಯಾವುದೇ ರಾಜಕೀಯ ಪಕ್ಷದ ಸದಸ್ಯತ್ವ ಪಡೆದಿರಬಾರದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಇಬ್ಬರು ಹಾಗೂ ಇತರೆ ವರ್ಗದ ಇಬ್ಬರು ಎನ್.ಜಿ.ಒಗಳಿಗೆ ಪ್ರಾತಿನಿಧ್ಯವಿರುವಂತೆ ಆಯ್ಕೆ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸ್ವೀಕೃತವಾದರೆ ಆಯ್ಕೆ ಪ್ರಕ್ರಿಯೆಯನ್ನು ಲಾಟರಿ ಮೂಲಕ ನಡೆಸಲಾಗುವುದು. ನಿಗಧಿತ ನಮೂನೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.