ಲೋಕಸಭೆಯ ಮಳೆಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಏಕಾಏಕಿ ಅನಾರೋಗ್ಯದ ನೆಪವೊಡ್ಡಿ ಜಗದೀಪ್ ಧನ್ಕರ್ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಆಡಳಿತಾರೂಢ ಎನ್ ಡಿಎ ಮೈತ್ರಿಕೂಟ ಮತ್ತು ವಿಪಕ್ಷ ಇಂಡಿಯಾ ಮೈತ್ರಿಕೂಟದ ನಡುವೆ ರಾಜಕೀಯ ಹಗ್ಗಜಗ್ಗಾಟಕ್ಕೆ ಎಡೆ ಮಾಡಿಕೊಟ್ಟಿತ್ತು.
ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಉಪ ರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಲಿದೆ. ಆ ನಿಟ್ಟಿನಲ್ಲಿ ಆಡಳಿತಾರೂಢ ಎನ್ ಡಿಎ ಮತ್ತು ವಿಪಕ್ಷ ಅಭ್ಯರ್ಥಿ ನಡುವೆ ತೀವ್ರ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ (68ವರ್ಷ) ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದಾಗಿ ಎನ್ ಡಿಎ ಘೋಷಿಸಿದೆ. ಮತ್ತೊಂದೆಡೆ ಅಚ್ಚರಿ ಎಂಬಂತೆ ವಿಪಕ್ಷ ಇಂಡಿಯಾ ಮೈತ್ರಿಕೂಟ ಸುಪ್ರೀಂಕೋರ್ಟ್ ಮಾಜಿ ಜಡ್ಜ್ ಜಸ್ಟೀಸ್ ಬಿ.ಸುದರ್ಶನ್ ರೆಡ್ಡಿ ಅವರ ಹೆಸರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ.
ಸಿ.ಪಿ.ರಾಧಾಕೃಷ್ಣನ್:
ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು 1957ರ ಅಕ್ಟೋಬರ್ 20ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ್ದರು. ತಂದೆ ಸಿ.ಕೆ.ಪೊನ್ನುಸ್ವಾಮಿ, ತಾಯಿ ಕೆ.ಜಾನಕಿ. ಕಾಲೇಜು ದಿನಗಳಲ್ಲಿ ಸಿ.ಪಿ.ರಾಧಾಕೃಷ್ಣನ್ ಟೆಬಲ್ ಟೆನ್ನಿಸ್ ನಲ್ಲಿ ಚಾಂಪಿಯನ್ ಆಗಿದ್ದರು. ತಮಿಳುನಾಡಿನ ತೂತುಕುಡಿಯ ಚಿದಂಬರಂ ಕಾಲೇಜ್ ನಲ್ಲಿ ಬಿಬಿಎ ಪದವಿ ಪಡೆದಿದ್ದರು.
ತನ್ನ 16ನೇ ವಯಸ್ಸಿನಿಂದಲೇ ರಾಧಾಕೃಷ್ಣನ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನ ಸಂಘದ ಜತೆ ಗುರುತಿಸಿಕೊಂಡಿದ್ದರು. 1974ರಲ್ಲಿ ರಾಧಾಕೃಷ್ಣನ್ ಅವರನ್ನು ಜನ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿತ್ತು. ನಂತರ 1980ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರು ಕ್ಷೇತ್ರದಲ್ಲಿ ಡಿಎಂಕೆಯ ಎಂ.ರಾಮನಾಥನ್ ಅವರ ವಿರುದ್ಧ ಬಿಜೆಪಿ -ಎಐಎಡಿಎಂಕೆ ಮೈತ್ರಿಕೂಟದ ರಾಧಾಕೃಷ್ಣನ್ ಅವರು ಗೆಲುವು ಸಾಧಿಸಿದ್ದರು. ನಂತರ 2004ರಲ್ಲಿ ನಡೆದ ಲೋಕಸಭಾ ಹಣಾಹಣಿಯಲ್ಲಿ ಸಿಪಿಐ ಅಭ್ಯರ್ಥಿ ಕೆ.ಸುಬ್ರಹ್ಮಣ್ಯ ವಿರುದ್ಧ ರಾಧಾಕೃಷ್ಣನ್ ಸೋಲುಂಡಿದ್ದರು.
2004ರಿಂದ 2006ರವರೆಗೆ ರಾಧಾಕೃಷ್ಣನ್ ಅವರು ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ರಾಧಾಕೃಷ್ಣನ್ ಅವರನ್ನು ಮೆಟ್ಟುಪಾಳ್ಯಂ ಕೋರ್ಟ್ ಆದೇಶದ ಮೇರೆಗೆ ಬಂಧಿಸಲಾಗಿತ್ತು.
2023ರ ಫೆ,12ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಧಾಕೃಷ್ಣನ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದರು. ಫೆ.18ರಂದು ರಾಧಾಕೃಷ್ಣನ್ ಅವರು ಪ್ರಮಾಣವಚನ ಸ್ವೀಕರಿಸಿದ್ದರು. 1985 ನವೆಂಬರ್ 25ರಂದು ರಾಧಾಕೃಷ್ಣನ್ ಅವರು ಆರ್.ಸುಮತಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
INDIA ಬ್ಲಾಕ್ ಮೈತ್ರಿಕೂಟದ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ:
ಬಾಲಕೃಷ್ಣನ್ ಸುದರ್ಶನ್ ರೆಡ್ಡಿ ಅವರು 1946ರ ಜುಲೈ 8ರಂದು ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ಅಕುಲಾ ಮೈಲಾರಾಂನಲ್ಲಿ ಜನಿಸಿದ್ದರು. ಕೃಷಿ ಕುಟುಂಬದ ಹಿನ್ನಲೆಯ ಸುದರ್ಶನ್ ರೆಡ್ಡಿ ಅವರು 1971ರಲ್ಲಿ ಉಸ್ಮಾನಿಯಾ ಯೂನಿರ್ವಸಿಟಿಯಲ್ಲಿ ಕಾನೂನು ಪದವಿ ಪಡೆದಿದ್ದರು. ಅದೇ ವರ್ಷ ಅವರು ಆಂಧ್ರಪ್ರದೇಶದ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ಸೇರ್ಪಡೆಗೊಂಡಿದ್ದರು.
ಆರಂಭದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನ ಹಿರಿಯ ವಕೀಲರಾದ ಕೆ.ಪ್ರತಾಪ್ ರೆಡ್ಡಿ ಅವರಲ್ಲಿ ಸುದರ್ಶನ್ ಅವರು ಸಹಾಯಕರಾಗಿ ಸಿವಿಲ್ ಮತ್ತು ಸಂವಿಧಾನ ವಿಷಯಗಳ ಆಸಕ್ತಿಯೊಂದಿಗೆ ವಕೀಲ ವೃತ್ತಿ ಕಲಿತಿದ್ದರು. 1988ರಲ್ಲಿ ಆಂಧ್ರ ಸರ್ಕಾರ ಸುದರ್ಶನ್ ಅವರನ್ನು ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿತ್ತು. 1993ರಲ್ಲಿ ಆಂಧ್ರಪ್ರದೇಶ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
1993ರ ಮೇ 2ರಂದು ಸುದರ್ಶನ್ ರೆಡ್ಡಿ ಅವರು ಆಂಧ್ರಪ್ರದೇಶ್ ಹೈಕೋರ್ಟ್ ಜಡ್ಜ್ ಆಗಿ ನೇಮಕಗೊಂಡಿದ್ದರು. 2005ರಲ್ಲಿ ಗುವಾಹಟಿ ಹೈಕೋರ್ಟ್ ನ ಚೀಫ್ ಜಸ್ಟೀಸ್ ಆಗಿ ಕಾರ್ಯನಿರ್ವಹಿಸಿದ್ದರು. 2007ರ ಜನವರಿ 12ರಂದು ರೆಡ್ಡಿ ಅವರನ್ನು ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕ ಮಾಡಲಾಗಿತ್ತು. 2011ರ ಜುಲೈ 7ರಂದು ರೆಡ್ಡಿ ಅವರು ಸೇವೆಯಿಂದ ನಿವೃತ್ತರಾಗಿದ್ದರು.
ನಂಬರ್ ಗೇಮ್ ಹೇಗಿದೆ?
ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಲಿದ್ದು, ಪ್ರಸ್ತುತ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್ ಡಿಎ ಮತ್ತು ವಿಪಕ್ಷಗಳ ಬಲಾಬಲದ ಅಂಕಿ-ಅಂಶ ಇಲ್ಲಿದೆ..
ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು ಸದಸ್ಯ ಬಲ 782. ಅಂದರೆ ಉಪರಾಷ್ಟ್ರಪತಿ ಅಭ್ಯರ್ಥಿ ಗೆಲುವು ಸಾಧಿಸಬೇಕಾದರೆ ಒಟ್ಟು ಸದಸ್ಯಬಲದ ಅರ್ಧಕ್ಕಿಂತ ಹೆಚ್ಚು ಮತ ಪಡೆಯುವುದು ಅಗತ್ಯ. ಉಪ ರಾಷ್ಟ್ಪಪತಿ ಗೆಲುವಿನ ಮ್ಯಾಜಿಕ್ ಸಂಖ್ಯೆ 392.
ಒಂದು ವೇಳೆ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಹೋದರೂ ಎನ್ ಡಿಎ ಅಭ್ಯರ್ಥಿ ಗೆಲುವು ಖಚಿತ. ಬಿಜೆಪಿ ನೇತೃತ್ವದ ಎನ್ ಡಿಎ 423 ಸಂಸದರನ್ನು ಹೊಂದಿದೆ. ಲೋಕಸಭೆಯಲ್ಲಿ 293 ಹಾಗೂ ರಾಜ್ಯಸಭೆಯಲ್ಲಿ 130 ಸದಸ್ಯರನ್ನು ಒಳಗೊಂಡಿದೆ. ಎನ್ ಡಿಎ ಮೈತ್ರಿಕೂಟದ ಎಲ್ಲಾ ಸಂಸದರು ರಾಧಾಕೃಷ್ಣನ್ ಅವರಿಗೆ ಬೆಂಬಲ ನೀಡಿದಲ್ಲಿ ಅನಾಯಾಸವಾಗಿ ಗೆಲುವು ಸಾಧ್ಯ. ಆದರೆ ಜಾತಿ ಅಥವಾ ರಾಜ್ಯದ ಅಭಿಮಾನದ ಲೆಕ್ಕಾಚಾರದಲ್ಲಿ ಎನ್ ಡಿಎ ಮೈತ್ರಿಕೂಟದ ಸಂಸದರು INDIA Block ಅಭ್ಯರ್ಥಿ ಪರ ಮತಚಲಾಯಿಸಿದಲ್ಲಿ ಚಿತ್ರಣ ಬದಲಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
