ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಎಫ್ಎಂಸಿಜಿ ವಿಭಾಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್ಸಿಪಿಎಲ್) ತಮಿಳುನಾಡಿನ ಪ್ರಮುಖ ಆಹಾರ ಉತ್ಪಾದನಾ ಸಂಸ್ಥೆ ಸದರ್ನ್ ಹೆಲ್ತ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ.
ಸದರ್ನ್ ಹೆಲ್ತ್ ಫುಡ್ಸ್ ತನ್ನ ‘ಮನ್ನಾ’ ಬ್ರ್ಯಾಂಡ್ ಮೂಲಕ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಉತ್ಪನ್ನಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಕಳೆದ ಎರಡು ದಶಕಗಳಿಂದ ಸಿರಿಧಾನ್ಯ ಮತ್ತು ಆರೋಗ್ಯ ಆಧಾರಿತ ಉತ್ಪನ್ನಗಳನ್ನು ತಯಾರಿಸುತ್ತಿರುವ ಈ ಸಂಸ್ಥೆ ದಕ್ಷಿಣ ಭಾರತದಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ ಎಂದು ರಿಲಯನ್ಸ್ ಪ್ರಕಟಣೆ ತಿಳಿಸಿದೆ.
ಈ ಸ್ವಾಧೀನದೊಂದಿಗೆ ಸಿರಿಧಾನ್ಯ ಆಧಾರಿತ ಮತ್ತು ಆರೋಗ್ಯ ಆಹಾರ ವಿಭಾಗದಲ್ಲಿ ರಿಲಯನ್ಸ್ನ ಹೂಡಿಕೆ ಮತ್ತು ಮಾರುಕಟ್ಟೆ ಪಾಲು ಮತ್ತಷ್ಟು ವಿಸ್ತರಿಸಲಿದೆ.
ಆರ್ಸಿಪಿಎಲ್ ನಿರ್ದೇಶಕ ಟಿ. ಕೃಷ್ಣಕುಮಾರ್ ಮಾತನಾಡಿ, “ಮನ್ನಾ ಬ್ರ್ಯಾಂಡ್ ತಮಿಳುನಾಡು ಹಾಗೂ ನೆರೆಯ ರಾಜ್ಯಗಳಲ್ಲಿ ವಿಶ್ವಾಸಾರ್ಹ ಆರೋಗ್ಯ ಆಹಾರ ಬ್ರ್ಯಾಂಡ್ ಆಗಿದೆ. ರಿಲಯನ್ಸ್ನ ಬಲವಾದ ವಿತರಣೆ ಹಾಗೂ ಪೂರೈಕೆ ಜಾಲದ ಮೂಲಕ ಈ ಬ್ರ್ಯಾಂಡ್ನ ಪೌಷ್ಟಿಕ ಉತ್ಪನ್ನಗಳನ್ನು ದೇಶದ ಇತರ ಭಾಗಗಳಲ್ಲಿಯೂ ಲಭ್ಯವಾಗುವಂತೆ ಮಾಡಲಾಗುವುದು,” ಎಂದು ತಿಳಿಸಿದ್ದಾರೆ.
ಈ ಸ್ವಾಧೀನದಿಂದ ಆರೋಗ್ಯ ಆಹಾರ ಮಾರುಕಟ್ಟೆಯಲ್ಲಿ ಸ್ಪರ್ಧೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
