ಕೆ.ಆರ್.ಪೇಟೆ: ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿವೆ. ಇವುಗಳನ್ನು ಉಳಿಸಿ, ಸಂರಕ್ಷಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ, ಇಂತಹ ದಿಕ್ಕಿನಲ್ಲಿ ರಾಜೇನಹಳ್ಳಿ ಗ್ರಾಮದ ಶ್ರೀ ಕಾಲಭೈರವೇಶ್ವರ ನೂತನ ದೇವಾಲಯ ಲೋಕಾರ್ಪಣೆ ಕಾರ್ಯ ಶ್ಲಾಘನೀಯ ಎಂದು ಶ್ರೀ ಶ್ರೀ ಡಾ:ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬೂಕನಕೆರೆ ಹೋಬಳಿಯ ರಾಜೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಧಾನಿಗಳ ಸಹಕಾರದಿಂದ ನಿರ್ಮಿಸಿದ ಶ್ರೀ ಕಾಲಭೈರವೇಶ್ವರ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ಮಾತನಾಡಿದರು. ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಬಹುದಲ್ಲದೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕೂಡಾ ಹೊಂದ ಬಹುದಾಗಿದೆ. ಆದ್ದರಿಂದ ಸಾಧನೆ ಮಾಡಲು ಕಷ್ಟವಾದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿಯೇ ಸಾಗಿ ಜನೋಪಯೋಗಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಭಗವಂತನ ಒಲುಮೆಗೆ ಪಾತ್ರರಾಗಬೇಕು ಎಂದು ಕಿವಿ ಮಾತು ಹೇಳಿದ ಶ್ರೀಗಳು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮ ಸೇರಿದಂತೆ ಯಾವುದೇ ಧರ್ಮವು ನೀನು ಮೋಸ ಮಾಡು ಮತ್ತೊಬ್ಬನಿಗೆ ಕೇಡು ಬಗೆದು, ತೊಂದರೆ ನೀಡಿ ಸಂತೋಷಪಡು ಎಂದು ಹೇಳುವುದಿಲ್ಲ.

ಹಸಿದವರಿಗೆ ಬೇಕಾಗಿರುವುದು ಅನ್ನವೇ ಹೊರತು ಚಿನ್ನವಲ್ಲ, ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ವಿಶ್ವದಲ್ಲಿಯೇ ಯಾವುದೂ ಇಲ್ಲಾ. ಒಳ್ಳೆಯ ಕೆಲಸ ಮಾಡುವ ಜನರನ್ನು ಈ ಸಮಾಜವು ಎಂದಿಗೂ ಬೆಂಬಲಿಸಿ ಉತ್ತೇಜಸಿ ಪ್ರೋತ್ಸಾಹ ನೀಡುವುದಿಲ್ಲ. ಆದ್ದರಿಂದ ನಮ್ಮ ಮನಸ್ಸು ಹಾಗೂ ಆತ್ಮಸಾಕ್ಷಿಯು ಒಪ್ಪುವ ಜನಪರವಾದ ಕೆಲಸಗಳನ್ನು ಮಾಡುತ್ತಾ ಫಲಾಫಲವನ್ನು ಭಗವಂತನಿಗೆ ಬಿಡೋಣ ಎಂದು ತಿಳಿಸಿದ ನಿರ್ಮಲಾನಂದನಾಥ ಶ್ರೀಗಳು ರಾಜೇನಹಳ್ಳಿ ಗ್ರಾಮದಲ್ಲಿ ಕಾಲ ಭೈರವನಿಗೆ ಭವ್ಯವಾದ ದೇವಾಲಯವನ್ನು ನಿರ್ಮಿಸಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಗ್ರಾಮಸ್ಥರು ಉಧ್ಯಮಿ ರೇವಣ್ಣ ಅವರ ನೇತೃತ್ವದಲ್ಲಿ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಲು ಹೊರಟಾಗ ನಿಂಧನೆ, ಅಪಪ್ರಚಾರ ಇದ್ದೇ ಇರುತ್ತದೆ ಅದಕ್ಕೆಲ್ಲಾ ರೇವಣ್ಣ ಅವರು ತಲೆ ಕೆಡಿಸಿಕೊಳ್ಳದೇ ಹೆಜ್ಜೆ ಹಾಕಬೇಕು. ಸರ್ವ ಸಂಘ ಪರಿ ತ್ಯಾಗಿಗಳಾದ ಸ್ವಾಮೀಜಿಗಳಾದ ನಮ್ಮನೇ ಸಮಾಜ ಬಿಟ್ಟಿಲ್ಲ, ನಮ್ಮನ್ನೇ ಬಯ್ತಾರೆ ಇನ್ನು ನಿಮ್ಮದು ಯಾವ ಲೆಕ್ಕ ಎಂದು ಹೇಳಿದ ಸ್ವಾಮೀಜಿ ರಾಜೇನಹಳ್ಳಿ ಗ್ರಾಮದ ಜನತೆಯ ಒಗ್ಗಟ್ಟನ್ನು ಶ್ಲಾಘಿಸಿ ಅಭಿನಂದಿಸಿದರು.
ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಸ್ವಾರ್ಥ ಸಾಧನೆ ಮಾಡುತ್ತಾ ಭ್ರಷ್ಟಾಚಾರಿಗಳನ್ನು ಪ್ರೋತ್ಸಾಹಿಸಿ ಆಯಕಟ್ಟಿನ ಜವಾಬ್ದಾರಿ ಸ್ಥಾನಗಳನ್ನು ನೀಡಿ ಮತ್ತಷ್ಟು ಭ್ರಷ್ಟಾಚಾರ ನಡೆಸಲು ಪ್ರೇರೇಪಣೆ ನೀಡುತ್ತಿವೆ. ನಾಗರೀಕ ಸಮಾಜವು ನೈತಿಕವಾಗಿ ಅಧ:ಪತನದತ್ತ ಸಾಗುತ್ತಿದೆ. ಈ ಹಿಂದೆ ಕಳ್ಳತನ, ಮೋಸ ಹಾಗೂ ವಂಚನೆ ಮಾಡಿ ಜೈಲಿಗೆ ಹೋಗಿ ಬಂದವರನ್ನು ಶ್ರೀ ಸಾಮಾನ್ಯರು ಮಾತನಾಡಿಸಲು ಹೆದರುತ್ತಿದ್ದರು, ಆದರೆ ಇಂದಿನ ಸಮಾಜದಲ್ಲಿ ಎಲ್ಲವೂ ತಳಕು ಪಳಕಾಗಿದೆ. ವಾಮ ಮಾರ್ಗದಲ್ಲಿ ಹಾಗೂ ಭ್ರಷ್ಟಾಚಾರ ಮಾಡಿ ಕೋಟಿಗಟ್ಟಲೆ ಹಣ ಮಾಡಿರುವವರಿಗೆ ಜನರು ಜೈಕಾರ ಹಾಕುತ್ತಿದ್ದಾರೆ. ಸಮಾಜದಲ್ಲಿ ನೈತಿಕ ಪ್ರಜ್ಞೆ ಹಾಗೂ ಪ್ರಾಮಾಣಿಕತೆ ಮಾಯವಾಗಿದೆ. ಹಾದಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ದು ಸಶಕ್ತ ಸದೃಢ ಸಮಾಜವನ್ನು ಕಟ್ಟುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಯುವಜನರಿಗೆ ಮಾರ್ಗದರ್ಶನ ಮಾಡಿ ಮುನ್ನಡೆಸುವ ದಿಕ್ಕಿನಲ್ಲಿ ಜಗದ್ಗುರುಗಳು ಮುಂದಾಗಬೇಕಿದೆ ಎಂದು ಸಂತೋಷ್ ಹೆಗಡೆ ಮನವಿ ಮಾಡಿದರು.

ಶಾಸಕ ಹೆಚ್.ಟಿ ಮಂಜು ಮಾತನಾಡಿ ಪ್ರತಿಯೊಬ್ಬರು ದೇವರು ಮತ್ತು ಧಾರ್ಮಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು.ಬಡವರ, ಗುರು-ಹಿರಿಯರ ಸೇವೆ ಮಾಡಬೇಕು, ಸದಾ ಒಳ್ಳೆಯ ಆಲೋಚನೆಗಳನ್ನು ಮಾಡಬೇಕು, ಸಾಧ್ಯವಾದರೆ ಇತರರಿಗೆ ಒಳ್ಳೆಯದನ್ನು ಮಾಡಿ, ಕೆಟ್ಟದ್ದನ್ನು ಮಾಡದಂತೆ ಹೇಳಿದರು. ಧಾರ್ಮಿಕ ಚಿಂತನೆಗಳಿಂದ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರೆಯಲು ಸಾಧ್ಯವಿದೆ. ಮಾನವ ಜನ್ಮ ಶ್ರೇಷ್ಠವಾದುದು. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು, ದಾನ-ಧರ್ಮ ಮಾಡುವ ಮೂಲಕ ಶ್ರೇಷ್ಠ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದರು.
ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀಸೌಮ್ಯ ನಾಥ ಸ್ವಾಮೀಜಿ, ಮಂಡ್ಯದ ಕೊಮ್ಮೆರಹಳ್ಳಿಯ ವಿಶ್ವ ಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ನೂತನ ದೇವಾಲಯ ಉದ್ಘಾಟನೆ ಪ್ರಯುಕ್ತ ಅರುಣೋದಯಕ್ಕೂ ಮುನ್ನ ಗಂಗೆ ಪೂಜೆ, ಆಗ್ರೋದಕ, ಮಹಾಗಣಪತಿ ಪೂಜೆ, ಪುಣ್ಯಃ, ಪಂಚಕಳಸ ಪೂಜೆ, ನವಗ್ರಹ ಪೂಜೆ, ಮಹಾಮಂತ್ಯುಜಯ ಪೂಜೆ, ಗಣಪತಿ ಮತ್ತು ಮಹಾರುದ್ರ ಹೋಮ ಹಾಗೂ ಸ್ವಾಮಿಗೆ ಕುಂಭ ಕಳಸ ಅಭಿಷೇಕ ನಂತರ ಸಹಸ್ರ ಪುಷ್ಪಾರ್ಚನೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್, ಉಧ್ಯಮಿ ಬೂಕಹಳ್ಳಿ ಮಂಜು, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ,ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಳ್ಳಿ ವಕೀಲ ನಾಗೇಶ್,ವಿಶ್ರಾಂತ ಪೊಲೀಸ್ ಅಧಿಕಾರಿ ಎಸಿಪಿ ಕೆ.ಎನ್.ರಮೇಶ್, ಗಂಜಿಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಪರಮೇಶ್, ಪಿಡಿಓ ಗೀತಾ, ಸಂಸ್ಕೃತಿ ಸಂಘಟಕ ಡಾ. ಅಂಚಿ ಸಣ್ಣಸ್ವಾಮಿಗೌಡ, ಉಧ್ಯಮಿ ಬಾಬುಲಿಂಗರಾಜ ಅರಸು, ಗ್ರಾಮದ ಮುಖಂಡರಾದ ಡಾ ರೇವಣ್ಣ,ಕುಮಾರ ಸ್ವಾಮಿ, ಆರ್.ಎಸ್.ಮುಕುಂದ, ಪದ್ಮೇಶ್, ಪೂವನಹಳ್ಳಿ ರೇವಣ್ಣ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ನರಸೇಗೌಡ, ವಕೀಲರಾದ ಆರ್.ಕೆ.ರಾಜೇಗೌಡ, ಮಹಿಳಾ ಹೋರಾಟಗಾರ್ತಿ ಕೆ. ಮಂಜುಳಾ ಚನ್ನಕೇಶವ, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ,ಸೇರಿದಂತೆ ರಾಜೇನಹಳ್ಳಿ ಹಾಗೂ ಸುತ್ತ ಮುತ್ತಲಿನ ಸಾವಿರಾರು ಜನರು ಶ್ರೀ.ಭೈರವೇಶ್ವರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
