ಬೆಂಗಳೂರು, ಜು.17: ಧರ್ಮಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಅತ್ಯಾಚಾರ, ಕೊಲೆ ನಡೆದಿದ್ದು, ನೂರಾರು ಶವಗಳು ಹೂಳಲಾಗಿದೆ ಎಂಬ ಭೀಕರ ಆರೋಪ ಬೆಳಕಿಗೆ ಬಂದಿದ್ದು, ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಫಿರ್ಯಾದುದಾರ ಸಾಕ್ಷಿಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಬಳಿಕವೂ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿಲ್ಲ. ಪೊಲೀಸರು ಖಾಲಿ ಹಾಳೆಯಲ್ಲಿ ಶವಗಳ ಸ್ಥಳ ಗುರುತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದೇ ವೇಳೆ ಆತನ ಹೇಳಿಕೆಗಳು ಆಯ್ದ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿರುವುದು ಗಂಭೀರವಾಗಿದೆ” ಎಂದರು.
ಭದ್ರತೆ ಮತ್ತು ನ್ಯಾಯದ ಬೇಡಿಕೆ
“ಸಾಕ್ಷಿಯು ತನ್ನ ವಕೀಲರೊಂದಿಗೆ ಶವ ಸ್ಥಳದ ಮಾಹಿತಿ ನೀಡಿ ಮುಂದೆ ತನಿಖೆಗೆ ಸಹಕಾರ ನೀಡುತ್ತಿದ್ದರೂ, ಪೊಲೀಸರು ತುರ್ತು ಕ್ರಮ ಕೈಗೊಂಡಿಲ್ಲ. ತನಿಖಾಧಿಕಾರಿ ಯಾರೋ ಒಬ್ಬರ ಸೂಚನೆಗೆ ಅನುಸಾರ ಪ್ರಶ್ನೆ ಕೇಳುತ್ತಿದ್ದಾರೆ. ಹೀಗಾಗಿ ತನಿಖಾ ತಂಡವನ್ನು ತಕ್ಷಣವೇ ಬದಲಿಸಿ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿರುವ ಎಸ್ಐಟಿ ರಚನೆ ಅವಶ್ಯಕವಾಗಿದೆ” ಎಂದು ಗೋಪಾಲಗೌಡ ತಿಳಿಸಿದರು.
ಇದನ್ನು ಓದಿ: ಕನ್ನಡ ಸಂಸ್ಕೃತಿ ಉಜ್ವಲವನ್ನಾಗಿಸಲು ಬದ್ಧತೆ – 18 ಸಾಧಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗೌರವ
367 ಶವಗಳ ಶಂಕಿತ ಪತ್ತೆ:
ವಕೀಲ ಎಸ್. ಬಾಲನ್ ಹೇಳುವಂತೆ, “ಧರ್ಮಸ್ಥಳದಲ್ಲಿ 367 ಶವಗಳು ಪತ್ತೆಯಾಗಿರುವ ಶಂಕೆಯಿದೆ. ಯುವತಿಯರು, ಯುವಕರು ಹಾಗೂ ಪುರುಷರಿಗೂ ಅನೇಕ ರೀತಿಯ ಹಿಂಸೆ ನಡೆದಿರುವ ಸಾಧ್ಯತೆ ಇದೆ. ಈ ಮಟ್ಟದ ಘಟನೆ ಸಾಮಾನ್ಯ ವ್ಯಕ್ತಿಗಳಿಂದ ಸಾಧ್ಯವಿಲ್ಲ. ಪ್ರಭಾವಿಗಳು ಈ ಹಿಂದೆ ಇರಬಹುದು” ಎಂದು ತಿಳಿಸಿದ್ದಾರೆ.
ಕೇರಳದ ಹಕ್ಕು:
ವಕೀಲ ಕೆ.ವಿ. ಧನಂಜಯ ಅವರು, “ಪ್ರತಿವರ್ಷ ಕೇರಳದ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ಬರುತ್ತಾರೆ. ಈ ಪ್ರಕರಣದಲ್ಲಿ ಕೇರಳದ ಸಂತ್ರಸ್ತರೂ ಇದ್ದರೆ, ಆ ರಾಜ್ಯಕ್ಕೂ ಈ ತನಿಖೆಯ ಮೇಲ್ವೀಕ್ಷಣೆ ಮಾಡುವ ಸಾಂವಿಧಾನಿಕ ಹಕ್ಕು ಇದೆ” ಎಂದು ಅಭಿಪ್ರಾಯಪಟ್ಟರು.
ಸರಕಾರದ ಮೌನ ಪ್ರಶ್ನೆ:
ವಕೀಲ ಸಿ.ಎಸ್. ದ್ವಾರಕನಾಥ್, “ಬಿಎನ್ಎಸ್ ಸೆಕ್ಷನ್ 183 ಅಡಿಯಲ್ಲಿ ಸಾಕ್ಷಿಯ ಹೇಳಿಕೆ ಅತ್ಯಂತ ಮಾನ್ಯ. ಅದನ್ನು ಖಾಸಗಿ ವ್ಯಕ್ತಿಗಳಿಗೆ ಸೋರಿಸುವುದು ಕಾನೂನು ವಿರೋಧಿ. ಗೃಹ ಸಚಿವರ ಗಮನಕ್ಕೆ ಈ ವಿಷಯ ತಂದಿದ್ದೇವೆ. ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಧರ್ಮಸ್ಥಳದಲ್ಲಿ ನಡೆದಿರುವ ಆರೋಪಗಳು ಆಘಾತಕಾರಿವಾಗಿದ್ದು, ಈ ಕುರಿತ ತನಿಖೆ, ಸಾಕ್ಷಿಗಳ ರಕ್ಷಣೆ, ಹಾಗೂ ನ್ಯಾಯದ ಪ್ರಕ್ರಿಯೆ ಪಾರದರ್ಶಕವಾಗಿರಲು ರಾಜ್ಯ ಸರ್ಕಾರ ಮತ್ತು ನ್ಯಾಯಾಂಗ ಸಂಸ್ಥೆಗಳು ತಕ್ಷಣ ಸ್ಪಂದಿಸಬೇಕಿದೆ. ನ್ಯಾಯ ದೊರಕಿಸಲು ಎಸ್ಐಟಿ ಅಗತ್ಯವೆಂಬ ಒತ್ತಾಯದ ಹಿನ್ನೆಲೆ ಮೇಲೆ ರಾಜ್ಯ ಸರ್ಕಾರದ ಮುಂದಿನ ನಡೆ ಬಹುಮಹತ್ವದ್ದಾಗಲಿದೆ.

[…] […]
[…] […]