ಹೊಳೆನರಸೀಪುರ, ಮಾ.22: ಜಿಲ್ಲೆಯ ಹೇಮಾವತಿ, ಯಗಚಿ, ವಾಟೆಹೊಳೆ ಹಾಗೂ ಹಾರಂಗಿ ಜಲಾಶಯಗಳ ವ್ಯಾಪ್ತಿಯ ಭೂಸ್ವಾಧೀನ ಪ್ರಕರಣಗಳ ಇತ್ಯರ್ಥಕ್ಕಾಗಿ ರೈತರಿಗೆ ವಿತರಿಸಲು ಸರ್ಕಾರದಿಂದ ಮಂಜೂರಾಗಿದ್ದ ₹10 ಕೋಟಿ 95 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿರುವುದು ರೈತರಿಗೆ ದ್ರೋಹ ಮಾಡಿದಂತಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ. ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತರಿಗೆ ಸಲ್ಲಬೇಕಿದ್ದ ಹಣವನ್ನು ವಾಪಸ್ ಕಳುಹಿಸುವುದು ಬೇಜವಾಬ್ದಾರಿ ಅಧಿಕಾರಿಗಳ ವರ್ತನೆ. ಇದನ್ನು ಟೀಕಿಸಿದರೆ ಅದು ಹೇಗೆ ಕಿರುಕುಳವಾಗುತ್ತದೆ? ಜನರ ಪರವಾಗಿ ಪ್ರಶ್ನಿಸದೇ ಸುಮ್ಮನೆ ಕೂರಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
“ಹಕ್ಕುಚ್ಯುತಿ ಮಂಡಿಸಿದ್ದೇನೆ, ಸತ್ಯ ಹೊರಬರುತ್ತದೆ”
ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಸಂದರ್ಭದಲ್ಲಿ ತೆರಿಗೆ ಬಟ್ಟೆ ತೊಡಿಸುವ ವಿಚಾರದಲ್ಲಿ ನಡೆದ ಘಟನೆ ಹಾಗೂ ತಮಗೆ ಆದ ಅವಮಾನವನ್ನು ಖಂಡಿಸಿ ಹಕ್ಕುಚ್ಯುತಿ ಮಂಡಿಸಿದ್ದೇನೆ ಎಂದು ರೇವಣ್ಣ ತಿಳಿಸಿದರು.
ಈ ಕುರಿತು ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಯಲಿದ್ದು, ಸತ್ಯಾಂಶ ಹೊರಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
“ಅವರದೇ ಪಕ್ಷದ ಸರ್ಕಾರ ಇರುವಾಗ ನಾನು ಹೇಗೆ ಕಿರುಕುಳ ನೀಡಲು ಸಾಧ್ಯ?” ಎಂದು ಪ್ರಶ್ನಿಸಿದ ಅವರು, ತೆರಿಗೆ ಬಟ್ಟೆ ತೊಡಿಸಲು ₹2 ಲಕ್ಷ ಕೊಟ್ಟಿದ್ದಾರೆ ಎಂಬ ಆರೋಪದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಾಸನದಲ್ಲಿ ಭೂ ಮಾಫಿಯಾ ವ್ಯಾಪಕ: ಏರ್ಪೋರ್ಟ್ ಭೂಮಿಯ ಮೇಲೂ ಕಣ್ಣು
ಹಾಸನ ಜಿಲ್ಲೆಯಲ್ಲಿ ಭೂ ಮಾಫಿಯಾ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ಆರೋಪಿಸಿದ ರೇವಣ್ಣ, ಏರ್ಪೋರ್ಟ್ಗೆ ಮೀಸಲಿಟ್ಟ ಭೂಮಿಯನ್ನೂ ಕಬಳಿಸಲು ಹುನ್ನಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
“ಯಾವ ಯಾವ ರಾಜಕಾರಣಿಗಳು ಭೂ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದಾರೆ, ಯಾವ ಅಧಿಕಾರಿಗಳು ಸಹಕಾರ ಕೊಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಕಾಲ ಬಂದಾಗ ದಾಖಲೆ ಸಮೇತ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ” ಎಂದು ಎಚ್ಚರಿಸಿದರು.
95 ಸಾವಿರ ಮೆಟ್ರಿಕ್ ಟನ್ ಎಂ-ಸ್ಯಾಂಡ್, ಜೆಲ್ಲಿ ಲೂಟಿ ಆರೋಪ
ತಮ್ಮ ತಾಲ್ಲೂಕಿನ ಕಲ್ಲೊಡೆಬಾರೆ ಕಾವಲು ಪ್ರದೇಶದಲ್ಲಿ ಸುಮಾರು 95 ಸಾವಿರ ಮೆಟ್ರಿಕ್ ಟನ್ ಎಂ-ಸ್ಯಾಂಡ್ ಮತ್ತು ಜೆಲ್ಲಿ ಲೂಟಿ ನಡೆದಿದೆ ಎಂದು ರೇವಣ್ಣ ಆರೋಪಿಸಿದರು.
“ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಲೂಟಿಕೋರರು ಯಾವ ಪಕ್ಷ ಅಧಿಕಾರದಲ್ಲಿದೆಯೋ ಆ ಪಕ್ಷದ ಜೊತೆಯಲ್ಲೇ ಸೇರಿ ಲಾಭ ಪಡೆಯುತ್ತಾರೆ” ಎಂದು ಅವರು ಕಿಡಿಕಾರಿದರು.
ಡೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ಕ್ರಷರ್ಗಳಿಗೆ ಮೌನ ಅನುಮತಿ?
ಹಂಗರಹಳ್ಳಿ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕಾನೂನುಬದ್ಧವಾಗಿ ನಡೆಯುತ್ತಿದ್ದ ಅನಂತ್ಕುಮಾರ್ ಅವರ ಕ್ರಷರ್ ಈಗ ಡೀಮ್ಡ್ ಫಾರೆಸ್ಟ್ ಪ್ರದೇಶಕ್ಕೆ ಸೇರಿದೆ ಎಂದು ನಿಲ್ಲಿಸಲಾಗುತ್ತಿದೆ. ಆದರೆ, ಸಂಸದರ ಆಪ್ತರೊಂದಿಗೆ ಸಂಪರ್ಕ ಹೊಂದಿರುವವರು ಡೀಮ್ಡ್ ಫಾರೆಸ್ಟ್ ಹಾಗೂ ಮೀಸಲು ಅರಣ್ಯ ಪ್ರದೇಶದಲ್ಲೇ ಕ್ರಷರ್ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಿಮ್ಸ್ ಆಸ್ಪತ್ರೆ ದನದ ದೊಡ್ಡಿಯಂತಾಗಿದೆ”
ಇತ್ತೀಚಿನ ದಿನಗಳಲ್ಲಿ ಹಾಸನ ಹಿಮ್ಸ್ ಆಸ್ಪತ್ರೆಯ ಪರಿಸ್ಥಿತಿ ದನದ ದೊಡ್ಡಿಯಂತಾಗಿದೆ ಎಂದು ಕಟುವಾಗಿ ಟೀಕಿಸಿದ ರೇವಣ್ಣ, ಅಲ್ಲಿ ವ್ಯಾಪಕ ದೂರುಗಳು ಬರುತ್ತಿದ್ದು, ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬಡಜನರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಹೊಳೆನರಸೀಪುರ ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳು, ವೈದ್ಯರು ಮತ್ತು ಶಾಸಕರ ನಿಧಿಯಿಂದ ಕೆಲವು ಯಂತ್ರೋಪಕರಣಗಳನ್ನು ಒದಗಿಸಿದ್ದೇನೆ. ಅಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆ ಎಂದು ಹೇಳಿದರು.
ಡಿಗ್ರೂಪ್ ನೌಕರರ ನೇಮಕಾತಿ ವಿಳಂಬಕ್ಕೆ ಆಕ್ರೋಶ
ಡಿಗ್ರೂಪ್ ನೌಕರರನ್ನು ನೇಮಿಸಿಕೊಳ್ಳಲು ಹೊರಗುತ್ತಿಗೆ ಅವಧಿ ಮುಗಿದು, ಟೆಂಡರ್ ಹಾಕಿ ತಿಂಗಳು ಕಳೆದಿದ್ದರೂ ಜಿಲ್ಲಾಧಿಕಾರಿಗಳು ಇನ್ನೂ ಅನುಮೋದನೆ ನೀಡಿಲ್ಲ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನೊಂದಣಿ ಕಚೇರಿ, ಗ್ರಾಮ ಪಂಚಾಯಿತಿ ಬೋಗಸ್ ಬಿಲ್ ವಿಚಾರ ಪ್ರಸ್ತಾಪ
ತಾ. ಹುಲಿವಾಳ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಭೂಮಿ ನೊಂದಣಿಯನ್ನು ನುಗ್ಗೆಹಳ್ಳಿ ನೋಂದಣಿ ಕಚೇರಿಯಲ್ಲಿ ಮಾಡಿಸಿರುವ ಬಗ್ಗೆ ಪ್ರಶ್ನೆ ಎತ್ತಿದ ರೇವಣ್ಣ, “ನಮ್ಮೂರಲ್ಲೇ ನೋಂದಣಿ ಕಚೇರಿ ಇಲ್ಲವೇ?” ಎಂದು ಆಡಳಿತ ಕ್ರಮವನ್ನು ಪ್ರಶ್ನಿಸಿದರು.
ತಾಲೂಕಿನ ಒಂದು ಗ್ರಾಮ ಪಂಚಾಯಿತಿಯಲ್ಲಿ ₹17 ಲಕ್ಷ ಬೋಗಸ್ ಬಿಲ್ ಮಾಡಿರುವ ಕುರಿತು ಶಾಸಕ ಮಂಜಣ್ಣ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ. ಇದನ್ನು ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿತ್ತು, ಆದರೆ ಮಾಡಿಲ್ಲ ಎಂದು ಆರೋಪಿಸಿದರು.
“ಒಬ್ಬ ಅಧಿಕಾರಿಯ ಬೇಜವಾಬ್ದಾರಿ ವರ್ತನೆಯನ್ನು ವಿಧಾನಸಭೆಯಲ್ಲಿ ಪ್ರಶ್ನಿಸಿರುವುದು ತಪ್ಪೇ?” ಎಂದು ಪ್ರಶ್ನಿಸಿದರು.
ಮೆಡಿಕಲ್ ಕಾಲೇಜು, ಫ್ಲೈಓವರ್, ಏರ್ಪೋರ್ಟ್ ಭೂಸ್ವಾಧೀನ ವಿಚಾರ
ಹಾಸನ ಮೆಡಿಕಲ್ ಕಾಲೇಜು, ಹಾಸನ ಹಾಗೂ ಹೊಳೆನರಸೀಪುರ ಫ್ಲೈಓವರ್ ಕಾಮಗಾರಿಗಳು ಹಲವು ವರ್ಷಗಳಿಂದ ಬಾಕಿ ಉಳಿದಿದ್ದವು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತದಲ್ಲಿ ಅವುಗಳಿಗೆ ಚಾಲನೆ ನೀಡಲಾಯಿತು ಎಂದು ರೇವಣ್ಣ ಸ್ಮರಿಸಿದರು.
ಆದರೆ, ಈಗ ಏರ್ಪೋರ್ಟ್ಗೆಂದು ಭೂಸ್ವಾಧೀನಪಡಿಸಿಕೊಂಡ ಭೂಮಿಯನ್ನೇ ಕಬಳಿಸಲು ಯತ್ನ ನಡೆಯುತ್ತಿದೆ ಎಂದು ಆರೋಪಿಸಿ,
“ಇದೆಲ್ಲ ನೋಡಿಕೊಂಡು ಹೇಗೆ ಸುಮ್ಮನಿರಲು ಸಾಧ್ಯ? ಕಾನೂನುಬಾಹಿರ ಕೆಲಸವನ್ನು ಪ್ರಶ್ನಿಸುವುದು ತಪ್ಪಾ? ಅಧಿಕಾರಿಗಳಿಗೆ ಲೂಟಿ ಮಾಡಲು ಬಿಡಬೇಕಾ?” ಎಂದು ಕಿಡಿಕಾರಿದರು.
“ಇಂದಿನ ಆಡಳಿತದಲ್ಲಿ ಜನರ ಕೆಲಸ ಆಗುತ್ತಿಲ್ಲ”
“ಅವರದೇ ಸರ್ಕಾರ ಇರುವಾಗ ನಾನು ಹೇಗೆ ಕಿರುಕುಳ ನೀಡಲು ಸಾಧ್ಯ? ಅಧಿಕಾರಿಗಳೇ ಅವರನ್ನು ಕರೆದುಕೊಂಡು ಬರುತ್ತಾರೆ. ಇಂದಿನ ಆಡಳಿತದಲ್ಲಿ ಜನರಿಗೆ ಬಹಳ ಹಿಂಸೆ ಆಗುತ್ತಿದೆ. ಜನರ ಕೆಲಸ ಆಗುತ್ತಿಲ್ಲ” ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದರು.
