ಬೇಲೂರು, ಮಾ.31: ಹಾಸನ–ಬೇಲೂರು ಫೋರ್ ಲೈನ್ ರಸ್ತೆ ಹಾಗೂ ಹಾಸನ–ಬೇಲೂರು–ಚಿಕ್ಕಮಗಳೂರು ರೈಲ್ವೆ ಮಾರ್ಗ ಯೋಜನೆಗಳ ವಿಳಂಬದ ಬಗ್ಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ. ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೇಲೂರಿನ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ–ಬೇಲೂರು ಎನ್ಎಚ್ 373 ರಸ್ತೆಗೆ 2004-05ರಲ್ಲೇ ಅನುಮೋದನೆ ದೊರೆತಿದ್ದು, 2018ರಲ್ಲಿ ಫೋರ್ ಲೈನ್ ಕಾಮಗಾರಿಗೂ ಅನುಮತಿ ಪಡೆದಿದ್ದರೂ ಹಲವು ವರ್ಷಗಳಿಂದ ಕಾಮಗಾರಿ ಆರಂಭವಾಗದಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಈ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚುತ್ತಿದ್ದು, ಭಾರಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ವಾರಕ್ಕೆ ಕನಿಷ್ಠ ಒಂದು ಅಥವಾ ಎರಡು ಅಪಘಾತಗಳು ಸಂಭವಿಸುತ್ತಿದ್ದು, ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಸನ–ಬೇಲೂರು–ಚಿಕ್ಕಮಗಳೂರು ರೈಲ್ವೆ ಮಾರ್ಗ ಯೋಜನೆಯೂ ಕಳೆದ ಎಂಟು ವರ್ಷಗಳಿಂದ ನೆತ್ತಿಗೇರಿರುವುದಾಗಿ ಆರೋಪಿಸಿದ ಅವರು, ಯೋಜನೆಗಾಗಿ ಒಟ್ಟು 531 ಎಕರೆ ಭೂಸ್ವಾಧೀನ ಅಗತ್ಯವಿದೆ. ಬೇಲೂರು ಮತ್ತು ಆಲೂರು ತಾಲೂಕುಗಳ 27 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದ್ದರೂ, ಇಷ್ಟೊಂದು ಅವಧಿಯಲ್ಲಿ ಕೇವಲ ಸುಮಾರು 5 ಎಕರೆ 30 ಗುಂಟೆ ಭೂಮಿ ಮಾತ್ರ ಸ್ವಾಧೀನಪಡಿಸಿಕೊಂಡಿರುವುದು ದುರಂತಕರ ಸ್ಥಿತಿ ಎಂದು ಟೀಕಿಸಿದರು.
ತಮ್ಮ ಅವಧಿಯಲ್ಲಿ ಈ ಎರಡೂ ಪ್ರಮುಖ ಯೋಜನೆಗಳಿಗೆ ಅನುಮತಿ ಪಡೆಯಲು ಹೋರಾಟ ನಡೆಸಿದ್ದಾಗಿ ಹೇಳಿದ ರೇವಣ್ಣ, ಸರ್ಕಾರದ ನಿರ್ಲಕ್ಷ್ಯ ಮತ್ತು ಆಡಳಿತಾತ್ಮಕ ವಿಳಂಬದಿಂದ ಅಭಿವೃದ್ಧಿ ಕಾಮಗಾರಿಗಳು ಮುಂದುವರಿಯದೆ ಉಳಿದಿವೆ ಎಂದು ಆರೋಪಿಸಿದರು.
ಇದೇ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ರಾಜ್ಯ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ ಅವರು, ಜನರು ಅವಕಾಶ ನೀಡಿದರೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತೇವೆ. ಅವಕಾಶ ಸಿಗದಿದ್ದರೂ ವಿರೋಧ ಪಕ್ಷದಲ್ಲಿದ್ದರೂ ಪಕ್ಷದ ನಿಲುವಿಗೆ ಬದ್ಧರಾಗಿರುತ್ತೇನೆ ಎಂದು ಹೇಳಿದರು.
ಸರ್ಕಾರದ ಮದ್ಯ ನೀತಿ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ ಮದ್ಯ ಲಭ್ಯವಾಗುತ್ತಿರುವುದರಿಂದ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಹಾಸನ ಜಿಲ್ಲೆಯ ಪ್ರಮುಖ ಮೂಲಸೌಕರ್ಯ ಯೋಜನೆಗಳ ವಿಳಂಬವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಚಂದ್ರೇಗೌಡ, ಅದ್ದೂರಿ ಕುಮಾರ್, ಕಾಚಿಹಳ್ಳಿ ದಿಲೀಪ್, ಉಮೇಶ್, ಶ್ರೀವತ್ಸ, ನಾಗೇಶ್, ಮುಗಳವಳ್ಳಿ ದಿನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
