ರಾಜ್ಕುಮಾರ್, ರಜನಿ ಸೇರಿದಂತೆ ದಕ್ಷಿಣದ ಅನೇಕ ಹೀರೋಗಳು ಅಮಿತಾಭ್ ಬಚ್ಚನ್ (Amitabh Bachchan) ಸಿನಿಮಾಗಳನ್ನು ರಿಮೇಕ್ ಮಾಡಿ ಸೂಪರ್ ಸ್ಟಾರ್ಗಳಾದರು’ ಎನ್ನುವ ಅಜ್ಞಾನದ ಹೇಳಿಕೆಯನ್ನು ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮ ಇತ್ತೀಚೆಗೆ ನೀಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ವಿಶೇಷ ಎಂದರೆ ರಾಜ್ಕುಮಾರ್ ಚಿತ್ರವನ್ನೇ ಅಮಿತಾಭ್ ಅವರು ರಿಮೇಕ್ ಮಾಡಿದ್ದರು! ಈ ವಿಚಾರ ಗೊತ್ತಿಲ್ಲದೆ ಆರ್ಜಿವಿ ಮಾತನಾಡಿದ್ದು ನಿಜಕ್ಕೂ ನಗು ತರಿಸುವ ಸಂಗತಿ.
ಆರ್ಜಿವಿ ಹೇಳಿಕೆ ಏನು?
’70 ಮತ್ತು 80ರ ದಶಕಗಳಲ್ಲಿ ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ದಕ್ಷಿಣದವರು ರಿಮೇಕ್ ಮಾಡಿದರು. ರಾಜ್ಕುಮಾರ್, ರಜನಿಕಾಂತ್, ಚಿರಂಜೀವಿ, ಎನ್ ಟಿ ರಾಮರಾವ್ ಅವರಂತಹ ನಟರು ಈ ರಿಮೇಕ್ಗಳ ಮೂಲಕ ಭಾರಿ ಜನಪ್ರಿಯತೆಯನ್ನು ಗಳಿಸಿದರು. 90 ರ ದಶಕದಲ್ಲಿ ಬಚ್ಚನ್ ಐದು ವರ್ಷ ವಿರಾಮ ತೆಗೆದುಕೊಂಡರು. ಈ ವೇಳೆ ಮ್ಯೂಸಿಕ್ ಕಂಪನಿಗಳು ಬಂದವು. ಆ ಸಂದರ್ಭದಲ್ಲಿ ಬಾಲಿವುಡ್ನವರು ಮ್ಯೂಸಿಕ್ ಓರಿಯೆಂಟೆಡ್ ಸಿನಿಮಾ ಮಾಡಲು ಆರಂಭಿಸಿದರು. ಆದರೆ, ಆದರೆ ದಕ್ಷಿಣದ ಸಿನಿಮಾ ನಿರ್ದೇಶಕರು ಮಾತ್ರ ಬಚ್ಚನ್ ಶೈಲಿಯಾದ ಮಾಸ್ ಮಸಾಲಾ ರೀತಿಯಲ್ಲಿ ಕಥೆ ಹೇಳುವುದನ್ನು ಮುಂದುವರಿಸಿದರು’ ಎಂದು ಆರ್ಜಿವಿ ಹೇಳಿದ್ದರು.
ಅಸಲಿಯತ್ತೇನು?
ರಾಜ್ಕುಮಾರ್ ಹಿರಿಯರು. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 1954ರಲ್ಲಿ. ಅಮಿತಾಭ್ ಸಿನಿಮಾ ರಂಗಕ್ಕೆ ಬಂದಿದ್ದು 15 ವರ್ಷಗಳ ಬಳಿಕ. ಅಂದರೆ 1969ರಲ್ಲಿ ಅವರು ತಮ್ಮ ಮೊದಲ ಚಿತ್ರ ಮಾಡಿದರು. 60ರ ದಶಕದಲ್ಲೇ ರಾಜ್ಕುಮಾರ್ ಸ್ಟಾರ್ ಹೀರೋ ಆಗಿ ಬಿಟ್ಟಿದ್ದರು. ಅವರಿಗೆ ಅಮಿತಾಭ್ ಬಚ್ಚನ್ ಚಿತ್ರಗಳನ್ನು ರಿಮೇಕ್ ಮಾಡಿ ಸ್ಟಾರ್ ಆಗಬೇಕು ಎನ್ನುವ ಯಾವುದೇ ಅನಿವಾರ್ಯತೆ ಇರಲಿಲ್ಲ.
ಸಿನಿಮಾ ರಿಮೇಕ್ ಮಾಡಿದ್ದ ಬಚ್ಚನ್
1978ರಲ್ಲಿ ಬಂದ ರಾಜ್ಕುಮಾರ್ ನಟನೆಯ ‘ಶಂಕರ್ ಗುರು’ ಚಿತ್ರ ಹಿಟ್ ಆಯಿತು. ವಿ. ಸೋಮಶೇಖರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರು. ಈ ಸಿನಿಮಾ ತೆಲುಗು, ತಮಿಳು ಹಾಗೂ ಹಿಂದಿಗೆ ರಿಮೇಕ್ ಆಯಿತು. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅವರು ಈ ಚಿತ್ರವನ್ನು ಮಾಡಿದ್ದರು.
ಸದ್ಯ ಆರ್ಜಿವಿ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವರ ಅಲ್ಪಜ್ಞಾನದ ಹೇಳಿಕೆಯನ್ನು ಎಲ್ಲರೂ ಖಂಡಿಸುತ್ತಿದ್ದಾರೆ.

[…] […]