ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಲಿನ ತಾಪಮಾನ ತೀವ್ರವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.
ಬಿಸಿಲಿನ ತಾಪಮಾನ ಹೆಚ್ಚಳದಿಂದ ಉಂಟಾಗುವ ಶಾಖಾಘಾತ (ಹೀಟ್ ಸ್ಟ್ರೋಕ್), ದೇಹದ ನೀರಿನ ಕೊರತೆ, ವಾಂತಿ–ಬೇಧಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಅಗತ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏನು ಮಾಡಬೇಕು?
-
ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಬೇಕು
-
ಸಾಕಷ್ಟು ನೀರು, ಮಜ್ಜಿಗೆ, ಎಳೆನೀರು, ಹಣ್ಣಿನ ರಸ ಸೇವಿಸಬೇಕು
-
ಹೊರಗೆ ಹೋಗುವಾಗ ಕುಡಿಯುವ ನೀರನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು
-
ಬೆಚ್ಚಗಿನ, ಮಸಾಲೆ ರಹಿತ, ಸಾತ್ವಿಕ ಆಹಾರ ಸೇವಿಸಬೇಕು
-
ಗಾಳಿಯಾಡುವ ಪಾದರಕ್ಷೆ ಧರಿಸಬೇಕು
-
ಶಾಖಾಘಾತ ಲಕ್ಷಣ ಕಂಡುಬಂದರೆ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ ವೈದ್ಯರನ್ನು ಸಂಪರ್ಕಿಸಬೇಕು ಅಥವಾ 104ಕ್ಕೆ ಕರೆ ಮಾಡಬೇಕು
ಏನು ಮಾಡಬಾರದು?
-
ಗಾಢ ಬಣ್ಣದ, ಬಿಗಿಯಾದ ಸಿಂಥೆಟಿಕ್ ಬಟ್ಟೆ ಧರಿಸಬಾರದು
-
ಸೋಡಾ, ಕಾರ್ಬೋನೇಟೆಡ್ ಪಾನೀಯಗಳು, ಹೆಚ್ಚು ಕಾಫಿ–ಟಿ ಸೇವಿಸಬಾರದು
-
ಬಿಸಿಯಾದ ಮಸಾಲೆಯುಕ್ತ ಆಹಾರ, ಮಧ್ಯಪಾನ ಮತ್ತು ಮಾಂಸಾಹಾರವನ್ನು ತಗ್ಗಿಸಬೇಕು
-
ತುಂಬಾ ತಣ್ಣಗಿನ ನೀರಿನಿಂದ ದೇಹ ಒರೆಸಿಕೊಳ್ಳಬಾರದು
-
ಶುದ್ಧೀಕರಿಸದ ನೀರು ಅಥವಾ ಕೆರೆ–ಕುಂಟೆಗಳ ನೀರು ಕುಡಿಯಬಾರದು
-
ರಸ್ತೆ ಬದಿ ತೆರೆದ ಆಹಾರ ಸೇವಿಸಬಾರದು
ಶಾಖಾಘಾತದ ಲಕ್ಷಣಗಳು
ತೀವ್ರ ಬಿಸಿಲಿನಿಂದ ಗೊಂದಲ, ಅಸಂಗತ ಮಾತು, ಪ್ರಜ್ಞೆ ಕುಂದು, ದೇಹದ ಉಷ್ಣತೆ ಹೆಚ್ಚಳ, ಬೆವರು ಕಡಿಮೆ ಆಗುವುದು ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ.
ಶಾಖಾಘಾತಕ್ಕೆ ಪ್ರಾಥಮಿಕ ಚಿಕಿತ್ಸೆ
ಬಾಧಿತ ವ್ಯಕ್ತಿಯನ್ನು ನೆರಳಿನಲ್ಲಿಗೆ ಸ್ಥಳಾಂತರಿಸಿ, ಬಟ್ಟೆ ಸಡಿಲಗೊಳಿಸಿ ಮಲಗಿಸಿ ಕಾಲುಗಳನ್ನು ಎತ್ತಿ ಸಾಮಾನ್ಯ ನೀರಿನಿಂದ ದೇಹ ಒರೆಸಬೇಕು. ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಮುಖ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಕಲುಷಿತ ನೀರಿನಿಂದ ವಾಂತಿ–ಬೇಧಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೈಗಳನ್ನು ಸಾಬೂನು ಬಳಸಿ ಸ್ವಚ್ಛವಾಗಿ ತೊಳೆಯುವುದು ಹಾಗೂ ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
