ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ.) ಅಡಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಅಧಿಕೃತ ಮಾಹಿತಿ ಪ್ರಕಾರ, ಮಾರ್ಚ್ 10ರಂದು ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ, ಎಲ್ಕೆಜಿ ಮತ್ತು ಮೊದಲ ತರಗತಿಗೆ ಅನುದಾನ ರಹಿತ ಶಾಲೆಗಳಲ್ಲಿ ಶೇಕಡಾ 25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳು ಹಾಗೂ ಅನುದಾನಿತ ಶಾಲೆಗಳ ಶಾಲಾವಾರು ಸೀಟುಗಳ ವಿವರಗಳನ್ನು ಜಿಲ್ಲಾ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
ಮಾರ್ಚ್ 11 ಮತ್ತು 12ರಂದು ಅರ್ಜಿ ಸಲ್ಲಿಸಲು ಪ್ರಯೋಗಾರ್ಥ (ಟ್ರಯಲ್) ಅವಧಿ ಇರಲಿದೆ. ನಂತರ ಮಾರ್ಚ್ 16ರಿಂದ ಏಪ್ರಿಲ್ 15ರವರೆಗೆ ಪೋಷಕರು ಆನ್ಲೈನ್ ಮೂಲಕ ಆರ್ಟಿಇ ಅಡಿ ದಾಖಲಾತಿಗೆ ಅರ್ಜಿ ಸಲ್ಲಿಸಬಹುದು.
ಏಪ್ರಿಲ್ 21ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಏಪ್ರಿಲ್ 27ರಂದು ಆನ್ಲೈನ್ ಲಾಟರಿ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಏಪ್ರಿಲ್ 29ರಿಂದ ಮೇ 15ರವರೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಪ್ರಕ್ರಿಯೆ ನಡೆಯಲಿದೆ.
ಇದಾದ ಬಳಿಕ ಮೇ 19ರಂದು ಎರಡನೇ ಸುತ್ತಿನ ಆನ್ಲೈನ್ ಸೀಟು ಹಂಚಿಕೆ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ. ಪೋಷಕರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.