ಸಕಲೇಶಪುರ, ಆಗಸ್ಟ್ 16, 2025: ಸಕಲೇಶಪುರ ತಾಲ್ಲೂಕಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (NH-75) ಶಿರಾಡಿ ಘಾಟ್ನ ದೊಡ್ಡತಪ್ಪಲೆ ಬಳಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಕಾರೊಂದರ ಮೇಲೆ ಬಿದ್ದ ಘಟನೆ ನಡೆದಿದೆ. ಪರಿಣಾಮ, ಕಾರು ಜಖಂಗೊಂಡಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ, ಉಪವಿಭಾಗಾಧಿಕಾರಿಗಳು, ಸಕಲೇಶಪುರ ವಲಯ ಅರಣ್ಯಾಧಿಕಾರಿಗಳಾದ ಹೇಮಂತ್ ಕುಮಾರ್, ಮಾರನಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಹದೇವ್, ಕೆಂಪುಹೊಳೆ ಬೀಟ್ನ ಅರಣ್ಯ ವೀಕ್ಷಕ ಲೋಕೇಶ್ ಮತ್ತು ಸಿಬ್ಬಂದಿಗಳು ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಘಟನೆಯಿಂದಾಗಿ ವಾಹನಗಳು ಗಂಟೆಗಟ್ಟಲೆ ಸಿಲುಕಿದ್ದು, ಶಿರಾಡಿ ಘಾಟ್ನಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸ್ಥಳೀಯರು ಮತ್ತು ಪ್ರಯಾಣಿಕರು ಜಾಗರೂಕರಾಗಿದ್ದು, ಚಾರ್ಮಡಿ ಘಾಟ್ ಅಥವಾ ಸಂಪಾಜೆ ರಸ್ತೆಗಳನ್ನು ಪರ್ಯಾಯ ಮಾರ್ಗವಾಗಿ ಬಳಸಲು ಸೂಚಿಸಲಾಗಿದೆ.
