ಸಕಲೇಶಪುರ : ನಗರದ ಕೇಂದ್ರಭಾಗದಲ್ಲಿರುವ ಸುಭಾಷ್ ಮೈದಾನ ಭಾರಿ ಮಳೆಯಿಂದಾಗಿ ಸಂಪೂರ್ಣ ಕೆಸರಿನಿಂದ ಆವೃತಗೊಂಡಿದ್ದು, ಕ್ರೀಡಾಪ್ರಿಯರಲ್ಲಿ ಅಸಮಾಧಾನ ಉಂಟಾಗಿದೆ. ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರೂ ಪ್ರತಿನಿತ್ಯ ಬಳಸುವ ಮೈದಾನ ಇದೀಗ ಆಟವಾಡಲು ಅಸಾಧ್ಯವಾದ ಸ್ಥಿತಿಯಲ್ಲಿದೆ.
ಇತ್ತೀಚೆಗೆ ಜನಪ್ರತಿನಿಧಿಗಳ ಸಾನಿಧ್ಯದಲ್ಲಿ ಮೈದಾನದ ಶುದ್ಧೀಕರಣ ಹಾಗೂ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಜರುಗಿದ್ದು, ಕ್ರೀಡಾ ಮನೋಭಾವ ಬೆಳೆಸಲು ಪ್ರಯತ್ನ ಮಾಡಲಾಗಿತ್ತು. ಆದರೆ ಮಳೆಯ ತೀವ್ರತೆಯಿಂದಾಗಿ ಮೈದಾನದ ಸ್ಥಿತಿ ಪುನಃ ಹದಗೆಟ್ಟಿದೆ.
ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ, “ಮಕ್ಕಳಿಗೆ ಆರೋಗ್ಯಕರ ಕ್ರೀಡಾ ವಾತಾವರಣ ಕಲ್ಪಿಸುವುದು ಆಡಳಿತದ ಹೊಣೆಗಾರಿಕೆ. ಪುರಸಭೆ ಹಾಗೂ ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಂಡು ಮೈದಾನದ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಸುಭಾಷ್ ಮೈದಾನವು ತಾಲೂಕು ಮಟ್ಟದ ಹಲವು ಕ್ರೀಡಾ ಚಟುವಟಿಕೆಗಳ ಕೇಂದ್ರವಾಗಿರುವುದರಿಂದ, ಅದರ ನಿರ್ವಹಣೆ ಹಾಗೂ ಅಭಿವೃದ್ಧಿ ತುರ್ತಿನ ಅಗತ್ಯವಾಗಿದೆ ಎಂಬುದು ಕ್ರೀಡಾಪ್ರಿಯರ ಅಭಿಪ್ರಾಯವಾಗಿದೆ.
