ಸಕಲೇಶಪುರ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕೆಸರಿನಲ್ಲಿ ಸಿಲುಕಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಓಂನಗರದಲ್ಲಿ ಶನಿವಾರ ಸಂಭವಿಸಿದೆ.
ಮೃತರನ್ನು ಭರತ್ (18) ಹಾಗೂ ಮಿಥುನ್ (19) ಎಂದು ಗುರುತಿಸಲಾಗಿದೆ. ಇಬ್ಬರೂ ಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಮಿಥುನ್ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಶನಿವಾರ ನಡೆಯುತ್ತಿದ್ದ ಪರೀಕ್ಷೆಗೆ ಗೈರಾಗಿದ್ದನು. ಭರತ್ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದನು.
ನಾಲ್ವರು ಸ್ನೇಹಿತರು ಸಮೀಪದ ಪ್ರಕಾಶ್ ಎಂಬುವವರ ಕಾಫಿ ತೋಟದಲ್ಲಿರುವ ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಭರತ್ ಹಾಗೂ ಮಿಥುನ್ ಕೆರೆಯೊಳಗಿನ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ. ಇಬ್ಬರು ಮುಳುಗುತ್ತಿರುವುದನ್ನು ಕಂಡ ಉಳಿದ ಇಬ್ಬರು ವಿದ್ಯಾರ್ಥಿಗಳು ಭಯಗೊಂಡು ಕೆರೆಯಿಂದ ಹೊರಬಂದಿದ್ದಾರೆ.
ನಂತರ ಸ್ಥಳೀಯರು ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದರು. ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಷಕರು ಮತ್ತು ಬಂಧುಗಳು ದುಃಖದಿಂದ ಕಣ್ಣೀರಿಟ್ಟರು.
ಘಟನೆಯ ಮಾಹಿತಿ ತಿಳಿದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
