
ಬೆಂಗಳೂರು: ಕರ್ನಾಟಕ ಎಲ್ಲ ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಶಾಂಪು, ಸೋಪುಗಳ ಮಾರಾಟ ನಿಷೇಧಿಸಿ ಅರಣ್ಯ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿದೆ.
ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಸೋಪು, ಶಾಂಪು ಬಳಕೆ ಹೆಚ್ಚಾಗಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಗಿದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ತಿಳಿಸಿದೆ. ನದಿ ದಡಗಳಲ್ಲಿ ಸೋಪು, ಶಾಂಪು ಮಾರಾಟ ಹಾಗೂ ಬಳಕೆ ಮಾಡದಂತೆ ಆದೇಶಿಸಲಾಗಿದೆ.
ಭಕ್ತರು ತಮ್ಮ ವಸ್ತುಗಳನ್ನು ನದಿಗಳಲ್ಲಿ ವಿಸರ್ಜನೆ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಈ ಆದೇಶ ಹೊರಡಿಸಿದ್ದಾರೆ.
ಅರಣ್ಯ ಇಲಾಖೆ ಆದೇಶದಲ್ಲೇನಿದೆ: ರಾಜ್ಯದ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ನದಿ ತೀರ, ಕಲ್ಯಾಣಿ ಹಾಗೂ ಸ್ನಾನಘಟ್ಟಗಳಲ್ಲಿ ಭಕ್ತರು ಶ್ಯಾಂಪು, ನೋಪು ಬಳಸಿ ಸ್ನಾನ ಮಾಡಿ, ಉಳಿದ ಸೋಪಿನ ತುಂಡು ಮತ್ತು ಶ್ಯಾಂಪು ಪ್ಯಾಕೇಟ್ಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ಇದೆಲ್ಲವೂ ನದಿ, ಕೊಳ, ಸರೋವರ ಸೇರಿ ನದಿಯ ನೀರಿನಲ್ಲೂ ನೊರೆ ಉಕ್ಕುತ್ತಿರುವುದು. ನೀರು ಕಲುಷಿತವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನದಿಗಳ ನೀರಿನ ಶುದ್ಧತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ರಾಜ್ಯದ ಎಲ್ಲ ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕೆರೆ, ಕಲ್ಯಾಣಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಇತ್ಯಾದಿ ಮಾರಾಟ ಮಾಡದಂತೆ ಹಾಗೂ ನದಿ, ಕಲ್ಯಾಣಿ, ಸರೋವರಗಳಲ್ಲಿ ಭಕ್ತರು ತಮ್ಮ ವಸ್ತ್ರಗಳನ್ನು ವಿಸರ್ಜನೆ ಮಾಡದಂತೆ ನಿಬರ್ಂಧಿಸಲು ಸೂಕ್ತ ಕ್ರಮ ವಹಿಸುವಂತೆ ಈ ಮೂಲಕ ಸೂಚಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.