ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಸೋಮವಾರ ಸಂಜೋಗ್ ಗುಪ್ತಾ ಅವರನ್ನು ಸಿಇಒ ಆಗಿ ನೇಮಕ ಮಾಡಿದೆ. ಸಂಜೋಗ್ ಅವರು ಜಿಯೋಸ್ಟಾರ್ನ ಸ್ಪೋರ್ಟ್ಸ್ ಮತ್ತು ಲೈವ್ ಎಕ್ಸ್ಪೀರಿಯನ್ಸ್ ವಿಭಾಗದ ಸಿಇಒ ಆಗಿದ್ದರು. ಮಹತ್ತರ ಬೆಳವಣಿಗೆಯಲ್ಲಿ ಸಂಜೋಗ್ ಅವರನ್ನು ಐಸಿಸಿ ಸೆಳೆದುಕೊಂಡಿದೆ. ಸಂಜೋಗ್ ಅವರು ಐಸಿಸಿಯ ಏಳನೇ ಸಿಇಒ ಆಗಿದ್ದಾರೆ. ಆಸ್ಟ್ರೇಲಿಯಾದ ಜೆಫ್ ಅಲಾರ್ಡೈಸ್ ಅವರು ಈ ಮುಂಚೆ ನಾಲ್ಕು ವರ್ಷ ಸಿಇಒ ಆಗಿದ್ದರು. ಜನವರಿಯಲ್ಲಿ ಅವರು ರಾಜೀನಾಮೆ ನೀಡಿದ ಬಳಿಕ ಆ ಹುದ್ದೆ ಖಾಲಿ ಉಳಿದಿತ್ತು.
ಐಸಿಸಿ ಸಿಇಒ ಸ್ಥಾನಕ್ಕೆ 25 ದೇಶಗಳಿಂದ 2,500ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖವಾಜ ನೇತೃತ್ವದ ನಾಮಿನೇಶನ್ಸ್ ಕಮಿಟಿ 12 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿತು. ನಂತರ, ಸಂಜೋಗ್ ಗುಪ್ತಾ ಅವರ ಹೆಸರನ್ನು ಸಿಇಒ ಸ್ಥಾನಕ್ಕೆ ಶಿಫಾರಸು ಮಾಡಲಾಯಿತು. ಛೇರ್ಮನ್ ಜಯ್ ಶಾ ಅವರು ಅನುಮೋದನೆ ನೀಡಿದ ಬಳಿಕ ಐಸಿಸಿ ಸಿಇಒ ಆಗಿ ಸಂಜೋಗ್ ಅವರನ್ನು ನೇಮಕ ಮಾಡಲಾಯಿತು.
