ನವದೆಹಲಿ, ಜನವರಿ 14: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೆಲ ಪ್ರಮುಖ ಬ್ಯಾಂಕಿಂಗ್ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿದ್ದು, ಎಟಿಎಂ ವಹಿವಾಟು ಶುಲ್ಕದ ಬಳಿಕ ಇದೀಗ ಐಎಂಪಿಎಸ್ (IMPS) ಹಣ ವರ್ಗಾವಣೆ ಶುಲ್ಕವನ್ನೂ ಹೆಚ್ಚಿಸಲು ಮುಂದಾಗಿದೆ. ಕಳೆದ ತಿಂಗಳು ಎಟಿಎಂ ಟ್ರಾನ್ಸಾಕ್ಷನ್ ಶುಲ್ಕವನ್ನು ಪರಿಷ್ಕರಿಸಿದ್ದ ಎಸ್ಬಿಐ, ಈಗ ದೊಡ್ಡ ಮೊತ್ತದ ಐಎಂಪಿಎಸ್ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧರಿಸಿದೆ. ಎಟಿಎಂ ಸಂಬಂಧಿತ ಹೊಸ ಶುಲ್ಕಗಳು 2025ರ ಡಿಸೆಂಬರ್ 1ರಿಂದ ಜಾರಿಗೆ ಬಂದಿದ್ದು, ಐಎಂಪಿಎಸ್ ಶುಲ್ಕ ಏರಿಕೆ 2026ರ ಫೆಬ್ರುವರಿ 15ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಎಸ್ಬಿಐ ಪರಿಷ್ಕೃತ ನಿಯಮಗಳ ಪ್ರಕಾರ, 25,000 ರೂವರೆಗಿನ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ, 25,000 ರೂಗಿಂತ ಹೆಚ್ಚಿನ ಮೊತ್ತವನ್ನು ಐಎಂಪಿಎಸ್ ಮೂಲಕ ಕಳುಹಿಸಿದರೆ ಗ್ರಾಹಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 25,000 ರೂನಿಂದ 1 ಲಕ್ಷ ರೂವರೆಗಿನ ಐಎಂಪಿಎಸ್ ವಹಿವಾಟಿಗೆ ₹2 ಶುಲ್ಕ ಮತ್ತು ಜಿಎಸ್ಟಿ, 1 ಲಕ್ಷ ರೂನಿಂದ 2 ಲಕ್ಷ ರೂವರೆಗಿನ ವಹಿವಾಟಿಗೆ ₹6 ಶುಲ್ಕ ಮತ್ತು ಜಿಎಸ್ಟಿ, ಹಾಗೂ 2 ಲಕ್ಷ ರೂನಿಂದ 5 ಲಕ್ಷ ರೂವರೆಗಿನ ವಹಿವಾಟಿಗೆ ₹10 ಶುಲ್ಕ ಮತ್ತು ಜಿಎಸ್ಟಿ ವಿಧಿಸಲಾಗುತ್ತದೆ. ಎಸ್ಬಿಐ ಮೊಬೈಲ್ ಆ್ಯಪ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಐಎಂಪಿಎಸ್ ಸೇವೆ ಲಭ್ಯವಿದ್ದು, ತತ್ಕ್ಷಣ ಹಣ ವರ್ಗಾವಣೆ ಇದರ ಪ್ರಮುಖ ವೈಶಿಷ್ಟ್ಯವಾಗಿದೆ. ದೊಡ್ಡ ಮೊತ್ತದ ವಹಿವಾಟುಗಳಿಗೆ ಗ್ರಾಹಕರು ನೆಫ್ಟ್ ಅಥವಾ ಆರ್ಟಿಜಿಎಸ್ ಸೇವೆ ಬಳಸಬಹುದಾಗಿದೆ.
ಇದನ್ನು ಓದಿ: 10 ನಿಮಿಷ ಡೆಲಿವರಿ ಗಡುವು ರದ್ದು – ಡೆಲಿವರಿ ಸಿಬ್ಬಂದಿಗೆ ಕೇಂದ್ರದಿಂದ ದೊಡ್ಡ ರಿಲೀಫ್
ಇನ್ನು ಎಟಿಎಂ ಟ್ರಾನ್ಸಾಕ್ಷನ್ ಶುಲ್ಕದಲ್ಲೂ ಎಸ್ಬಿಐ ಹೆಚ್ಚಳ ಮಾಡಿದೆ. ಎಸ್ಬಿಐ ಗ್ರಾಹಕರು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳಿಗೆ ಐದು ವಹಿವಾಟುಗಳನ್ನು ಉಚಿತವಾಗಿ ಮಾಡಿಕೊಳ್ಳಬಹುದಾಗಿದೆ. ಈ ಮಿತಿಯನ್ನು ಮೀರಿದ ನಂತರ ಪ್ರತಿ ವಹಿವಾಟಿಗೂ ಶುಲ್ಕ ವಿಧಿಸಲಾಗುತ್ತದೆ. ಡಿಸೆಂಬರ್ 1ರಿಂದ ಜಾರಿಗೆ ಬಂದಿರುವ ಹೊಸ ದರಗಳ ಪ್ರಕಾರ, ಪ್ರತಿ ಕ್ಯಾಷ್ ವಿತ್ಡ್ರಾಯಲ್ಗೆ ಶುಲ್ಕವನ್ನು ₹21ರಿಂದ ₹23ಕ್ಕೆ ಹೆಚ್ಚಿಸಲಾಗಿದ್ದು, ಇದರ ಮೇಲೆ ಜಿಎಸ್ಟಿಯೂ ಅನ್ವಯವಾಗುತ್ತದೆ. ಹಣಕಾಸು ಅಲ್ಲದ ವಹಿವಾಟುಗಳಾದ ಬ್ಯಾಲನ್ಸ್ ಪರಿಶೀಲನೆ ಮುಂತಾದ ಸೇವೆಗಳಿಗೆ ₹11 ಮತ್ತು ಜಿಎಸ್ಟಿ ಶುಲ್ಕ ವಿಧಿಸಲಾಗುತ್ತದೆ. ಈ ಪರಿಷ್ಕೃತ ಶುಲ್ಕಗಳಿಂದಾಗಿ ಗ್ರಾಹಕರು ವಹಿವಾಟು ಮಾಡುವಾಗ ಹೆಚ್ಚಿನ ಎಚ್ಚರ ವಹಿಸುವ ಅಗತ್ಯವಿದೆ.

[…] […]