ಅರಕಲಗೂಡು: ತಾಲ್ಲೂಕಿನ ಹನ್ಯಾಳು ಗ್ರಾಮದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಚನ ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಉಚಿತವಾಗಿ ವಚನ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅರಕಲಗೂಡು ಕ್ಷೇತ್ರದ ಶಾಸಕರ ಧರ್ಮಪತ್ನಿ ತಾರಾ ಮಂಜು ಅವರು ವಿದ್ಯಾರ್ಥಿಗಳಿಗೆ ವಚನ ಪುಸ್ತಕ ವಿತರಣೆ ಮಾಡಿ ಮಾತನಾಡಿ, 12ನೇ ಶತಮಾನದ ಶಿವಶರಣರ ವಿಚಾರಧಾರೆಗಳು ಸರ್ವಕಾಲಕ್ಕೂ ಅತೀತವಾದವು. ಅಳಿದುಹೋಗುತ್ತಿರುವ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿ ಜನಮಾನಸದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡಾ. ಶ್ರೀ ರಾಜೇಂದ್ರಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶರಣ ಸಾಹಿತ್ಯ ಪರಿಷತ್ತು ರಚನೆಯಾಗಿ ನಾಡಿನಾದ್ಯಂತ ಇಂತಹ ಮೌಲಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಹಿರಿಯ ಉಪನಿರ್ದೇಶಕರು ಹಾಗೂ ಲೆಕ್ಕ ಪರಿಶೋಧನಾ ಸಮಿತಿ ಇಲಾಖೆ ಎಚ್.ಇ. ಅಶೋಕ್, ಎಂ.ಎನ್. ಕುಮಾರಸ್ವಾಮಿ (ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು), ಯುವ ಘಟಕದ ಅಧ್ಯಕ್ಷರು ಆರ್.ಕೆ. ಶ್ರೀನಿವಾಸ್, ಮುಖ್ಯ ಶಿಕ್ಷಕರು ರವಿಕುಮಾರ್, ಸಂತೋಷ್ ಸೇರಿದಂತೆ ಹಲವರು ವಿದ್ಯಾರ್ಥಿಗಳಿಗೆ ವಚನ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.
– ಕುಮಾರಸ್ವಾಮಿ
