ಹಾಸನ: ಜಿಲ್ಲೆಯಾದ್ಯಂತ ಶನಿವಾರದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭಗೊಂಡಿವೆ. ನಗರದ ಗಂಧದ ಕೋಠಿಯಲ್ಲಿರುವ ಬಾಲಕಿಯರ ವಿಭಜಿತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಭೇಟಿ ನೀಡಿ ಪರೀಕ್ಷಾರ್ಥಿಗಳಿಗೆ ಶುಭಾಶಯ ಕೋರಿದರು.
ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಸಂಸದರು ವಿವಿಧ ಪರೀಕ್ಷಾ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿ, ಪರೀಕ್ಷೆಗೆ ಮಾಡಿಕೊಂಡಿರುವ ಸಿದ್ಧತೆ ಕುರಿತು ವಿಚಾರಿಸಿದರು. ಯಾವುದೇ ಆತಂಕಕ್ಕೊಳಗಾಗದೆ ಧೈರ್ಯವಾಗಿ ಪ್ರಶ್ನೆಪತ್ರಿಕೆಯನ್ನು ಸಂಪೂರ್ಣವಾಗಿ ಓದಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದರು. ಹೆಚ್ಚಿನ ಅಂಕಗಳನ್ನು ಗಳಿಸಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.

ಇದೇ ವೇಳೆ ಪರೀಕ್ಷಾ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ಆರೋಗ್ಯ ಸಹಾಯಕಿಯರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ತರಲಾಗಿರುವ ಔಷಧಿಗಳ ಕುರಿತು ಪರಿಶೀಲನೆ ನಡೆಸಿದರು. ಅಗತ್ಯವಿದ್ದಲ್ಲಿ ಗ್ಲೂಕೋಸ್ ಪೌಡರ್ ಸಿದ್ಧವಾಗಿರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ಪರೀಕ್ಷೆಗಳು ನಡೆಯುತ್ತಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
