ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ 2025ನೇ ಸಾಲಿನಲ್ಲಿ ನೀಡಲಾಗುವ ಪ್ರತಿಷ್ಠಿತ ‘ಲೋಹಿಯಾ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರನ್ನು ಆಯ್ಕೆ ಮಾಡಲಾಗಿದೆ.
ರೈತ ಹಾಗೂ ಜನಪರ ಹೋರಾಟಗಾರರಾಗಿ, ಸಾಮಾಜಿಕ–ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಮತ್ತು ಪತ್ರಿಕೋದ್ಯಮದಲ್ಲಿಯೂ ತಮ್ಮನ್ನು ಅವಿರತವಾಗಿ ತೊಡಗಿಸಿಕೊಂಡಿರುವ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಪ್ರಶಸ್ತಿಯು ಗೌರವ ಫಲಕ, ಸನ್ಮಾನ ಪತ್ರ ಹಾಗೂ ₹5,000 ನಗದು ಬಹುಮಾನವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 19, 2025 (ಶುಕ್ರವಾರ) ಬೆಳಗ್ಗೆ 11:15ಕ್ಕೆ ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಗಾಂಧಿ ಭವನದ ಅಧ್ಯಕ್ಷರಾದ ಡಾ. ವೂಡೇ ಪಿ. ಕೃಷ್ಣ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಜಾವಣಿ ಸಂಪಾದಕ ರವೀಂದ್ರ ಭಟ್, ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ, ದೂರದರ್ಶನ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್. ಆರತಿ, ಹಾಗೂ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಆರ್. ವೆಂಕಟೇಶ್ ಭಾಗವಹಿಸಲಿದ್ದಾರೆ.
ಶಿವಾನಂದ ತಗಡೂರು ಅವರ ಆಯ್ಕೆ ಪತ್ರಿಕೋದ್ಯಮ ಹಾಗೂ ಜನಪರ ಚಳವಳಿಗಳಿಗೆ ಗೌರವ ತಂದಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

[…] ಇದನ್ನು ಓದಿ: ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರಿಗೆ… […]