ಬೆಂಗಳೂರು, ಫೆ.6: ನಗರದಲ್ಲಿ ವಿದೇಶಿ ರಾಯಭಾರಿ ಕಚೇರಿಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಟಲಿ ಹಾಗೂ ಜಪಾನ್ ಕಾನ್ಸುಲೇಟ್ಗಳಿಗೆ ಬಂದಿದ್ದ ಬೆದರಿಕೆಯ ಬಳಿಕ ಇದೀಗ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದು ಬೆಳಕಿಗೆ ಬಂದಿದೆ.
ಆರ್.ಟಿ.ನಗರದ ಗಂಗಾನಗರದಲ್ಲಿರುವ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗೆ ಜನವರಿ 29ರಂದು ಕಿಡಿಗೇಡಿಗಳು ಇ-ಮೇಲ್ ಕಳುಹಿಸಿ, “5 RDX ಮತ್ತು ಐಇಡಿ ಬಳಸಿ ಸ್ಫೋಟ ನಡೆಸಲಾಗುವುದು” ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ರಾಯಭಾರಿ ಕಚೇರಿ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಆರ್.ಟಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದಕ್ಕೂ ಮೊದಲು ಹಲಸೂರಿನಲ್ಲಿರುವ ಇಟಾಲಿಯನ್ ಕಾನ್ಸುಲೇಟ್ ಕಚೇರಿಗೆ gaina_ramesh@outlook.com ಇ-ಮೇಲ್ ಐಡಿಯಿಂದ bangalore.visa@esteri.it ವಿಳಾಸಕ್ಕೆ ‘5 RDX ಬಾಂಬ್ ಸ್ಫೋಟ ಮಾಡುತ್ತೇವೆ’ ಎಂಬ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಈ ಸಂಬಂಧ ಕಾನ್ಸುಲೇಟ್ ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕ್ ಒ. ಮಿಲಾನೋ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೇ ವೇಳೆ ಕಬ್ಬನ್ ರಸ್ತೆಯಲ್ಲಿರುವ ಜಪಾನ್ ಕಾನ್ಸುಲೇಟ್ ಜನರಲ್ ಕಚೇರಿಗೂ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ‘Please be careful, someone will kill you’ ಎಂದು ಕೊಲೆ ಬೆದರಿಕೆ ಹಾಕಲಾಗಿದೆ. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಇಟಲಿ, ಜಪಾನ್ ಹಾಗೂ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗಳಿಗೆ ಬಂದಿರುವ ಬೆದರಿಕೆಗಳ ಮೂಲ ಪತ್ತೆಗಾಗಿ ಪೊಲೀಸರು ಇ-ಮೇಲ್ ಐಡಿ ಮತ್ತು ಕರೆಗಳ ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ಎಲ್ಲಾ ರಾಯಭಾರಿ ಕಚೇರಿಗಳ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
