ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಶೀತದ ಅಲೆ ತೀವ್ರಗೊಂಡಿದ್ದು, ಜನಜೀವನ ಗಢಗಢ ನಡಗುತ್ತಿದೆ. ಉತ್ತರ ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೀವ್ರ ಚಳಿ ನಿರೀಕ್ಷೆಯಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಗಣನೀಯವಾಗಿ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಇಲಾಖೆ ಸಲಹೆ ನೀಡಿದೆ.
ಇನ್ನೊಂದೆಡೆ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗುವ ಜೊತೆಗೆ ಒಣ ಹವಾಮಾನ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ.
ಬೆಂಗಳೂರಲ್ಲೂ ಚಳಿ ಹೆಚ್ಚಳ
ರಾಜಧಾನಿ ಬೆಂಗಳೂರಿನಲ್ಲೂ ಮೈಕೊರೆಯುವ ಚಳಿ ಜನರನ್ನು ಕಂಗೆಡಿಸಿದ್ದು, ಬೆಳಗಿನ ಹಾಗೂ ರಾತ್ರಿ ಸಮಯದಲ್ಲಿ ತಾಪಮಾನ ಇಳಿಕೆಯಾಗುತ್ತಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಜೊತೆಗೆ ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಒಣ ಹವಾಮಾನ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣ ಹವೆಯ ವಾತಾವರಣ ಮುಂದುವರಿದಿದೆ.
ಇದೇ ವೇಳೆ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವಾಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶೀತದ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಆರೋಗ್ಯ ಸಮಸ್ಯೆ ಇರುವವರು ವಿಶೇಷ ಜಾಗ್ರತೆ ವಹಿಸುವಂತೆ ಇಲಾಖೆ ಸಲಹೆ ನೀಡಿದೆ.

[…] ಇದನ್ನು ಓದಿ: ಕರುನಾಡಿಗೆ ತೀವ್ರ ಚಳಿ; 5 ಜಿಲ್ಲೆಗಳಿಗೆ ಆರೆ… […]