ದಿನವೂ ನಮ್ಮ ಸ್ಟೇಷನ್ ಹತ್ತಿರ ಒಬ್ಬ ವ್ಯಕ್ತಿಯನ್ನು ನೋಡುತ್ತಾ ಇದ್ದೆ, ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಅಂತ ಅನ್ನಿಸಿದ್ದ ನನಗೆ , ಯಾಕೆಂದರೆ ನಮ್ಮವರ ದೃಷ್ಟಿಯಲ್ಲಿ ಆತ ಹುಚ್ಚ , ಆದರೆ ನನ್ನ ಕವಿ ಹೃದಯ ಬೇರೆನೇ ಹೇಳುತ್ತಿತ್ತು. ಇವನಲ್ಲಿ ಹೇಳಿಕೊಳ್ಳಲಾಗದ ಯಾವುದೋ ವಿಷಯ ಅಡಗಿದೆ ಅನ್ನಿಸೋಕೆ ಶುರುವಾಗಿತ್ತು , ಪ್ರತಿ ನೈಟ್ ರೌಂಡ್ಸ್ ನಲ್ಲಿ ಅವನು ಎದುರಾಗುತ್ತಿದ್ದ , ಸುಮ್ಮನೆ ನೋಡಿ ಒಂದು ನಗೆಯನ್ನು ಬೀರುತ್ತಿದ್ದ, ಕೆಲವೇ ಕೆಲವು ತಿಂಗಳುಗಳಲ್ಲಿ ಅವನ ಕಷ್ಟ ಸುಖಗಳನ್ನು ಹಳೆಯ ನೆನಪುಗಳನ್ನು ನಾನು ಕೇಳಬೇಕು ಎನ್ನುವ ಮಟ್ಟಿಗೆ ಮನಸ್ಸು ಕಾತುರತೆಯಿಂದ ಕಾಯುತ್ತಿತ್ತು ನನಗೆ .
ಒಂದು ದಿನ ಸಂಜೆ ಅವನನ್ನು ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ , ರಸ್ತೆಯ ಬದಿಯಲ್ಲಿ ಬಜ್ಜಿ ತಿಂದು ಟೀ ಕುಡಿದು, ನಂತರ ಸ್ವಲ್ಪ ಮಾತನಾಡಲು ಶುರು ಮಾಡಿದೆ, ನನಗೆ ನೀನು ಹುಚ್ಚನಂತೆ ಕಾಣುವುದಿಲ್ಲ, ಎಲ್ಲವೂ ಅಡಗಿರುವ ನಿಗೂಢ ವ್ಯಕ್ತಿಯಂತೆ ಕಾಣುವೆ ನೀನು, ನಿನ್ನ ಮನಸ್ಸಿನಲ್ಲಿ ಅಡಗಿರುವ ಹಳೆಯ ಕಥೆಯನ್ನು , ನಿನ್ನ ಮನಸ್ಸಿನ ದುಗುಡವನ್ನು ಕೇಳಬೇಕು ಅನ್ನಿಸುತ್ತಾ ಇದೆ, ಹೇಳುವೆಯಾ ಎಂದು ನಾನು ಕೇಳಿದೆ.
ಒಂದು ಸಾರಿ ಹೆದರಿದವನಂತೆ ನೋಡಿ , ನಂತರ ಸಾವಕಾಶವಾಗಿ ಮಾತನಾಡಲು ಶುರು ಮಾಡಿದ.
ಸರ್ ನನ್ನ ನಿಜವಾದ ಹೆಸರು ಗೋವರ್ಧನ್ ಎಂದು , ನಾನು ಹುಚ್ಚನೂ ಅಲ್ಲ , ದಡ್ಡನೂ ಅಲ್ಲ, ನನ್ನ ಬಿ ಈ ಮಾಡಿದ್ದೇನೆ ಎಂದ.
ನನಗೆ ಎಲ್ಲಿಲ್ಲದ ಆಶ್ಚರ್ಯಗಳು ಕುತೂಹಲಗಳು ಮುಖದ ಮೇಲೆ ಮೂಡಿದವು,
ನಂತರ ಅವನೇ ಹೇಳಲು ಶುರುಮಾಡಿದ ,ನಾನು ಧಾರವಾಡದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿ ಈ ಮುಗಿಸಿದ್ದೇನೆ ಸರ್ , ಕಾಲೇಜಿನಲ್ಲಿ ನಾನು ಟಾಪರ್ ಆಗಿದ್ದರಿಂದ ನನಗೆ ಮುಂಬೈನ ಪ್ರತಿಷ್ಠಿತ ಕಂಪನಿಯೊಂದು ನನ್ನ ಕೊನೆಯ ವರ್ಷದ ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೆ ನನ್ನನ್ನು ಆಯ್ಕೆ ಮಾಡಿಕೊಂಡಿತ್ತು , ಅದರಂತೆ ಮುಂಬೈಗೆ ತೆರಳಿದ ನಾನು ಕೈ ತುಂಬಾ ಸಂಬಳ, ಮನೆ ,ಕಾರು ಎಲ್ಲವೂ ನನ್ನದಾಗಿತ್ತು .
ಆದರೆ ನಾನು ಜೀವನದಲ್ಲಿ ತೆಗೆದುಕೊಂಡ ಆ ಒಂದು ನಿರ್ಧಾರ ನನ್ನ ಇಡೀ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು ಸರ್ ಎಂದನು.
ಏನೆಂದು ನಾನು ಕಣ್ಣರಳಿಸಿ ಕೇಳಿದೆ,
ನನಗೆ ಅಪ್ಪ ಇರಲಿಲ್ಲ ಸರ್, ಕಷ್ಟ ಸುಖಗಳನ್ನು ಹೇಳಿಕೊಳ್ಳಲು , ತಪ್ಪು ನಡೆ ಇಟ್ಟಾಗ ತಿದ್ದಿ ಬುದ್ದಿ ಕಲಿಸಲು ಹೇಳಿಕೊಳ್ಳುವಂತಹ ಹಿರಿಯರು ಯಾರು ಇರಲಿಲ್ಲ, ಓದು ಬಾರದ ಮುಗ್ಧ ಮನಸ್ಸಿನ ಅಮ್ಮನನ್ನು ಬಿಟ್ಟರೆ ನನಗೆ ಪ್ರಪಂಚವೇ ಇನ್ನೊಂದು ಇರಲಿಲ್ಲ.
ನಾನು ಪ್ರತಿಬಾರಿ ಊರಿಗೆ ಹೋದಾಗ ಅಮ್ಮ ಮದುವೆಯ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಳು, ಮುಂಬೈ ಅಂತ ಜನಜಗುಳಿಯ ವಾತಾವರಣ ನೋಡಿದ್ದ ನನಗೆ ಹಾಗೂ ಈಗಿನ ಕಾಲದ ಹುಡುಗಿಯರ ಮೇಲೆ ಅಷ್ಟಾಗಿ ನಂಬಿಕೆ ಇರಲಿಲ್ಲವಾದ್ದರಿಂದ ಮದುವೆ ಬೇಡ ಎನ್ನುತ್ತಲೇ ಇದ್ದೆ ಆದರೂ ಅಮ್ಮನ ಒತ್ತಾಯಕ್ಕೆ ಮಡಿದು ಮದುವೆಗೆ ಅಸ್ತು ಎಂದು ಬಿಟ್ಟೆ, ಅಮ್ಮ ಖುಷಿಯಿಂದಲೇ ತನ್ನೆಲ್ಲಾ ಬಂಧು ಬಳಗಕ್ಕೆ , ಸ್ನೇಹಿತರಿಗೆ ಹೆಣ್ಣನ್ನು ನೋಡಲು ತಿಳಿಸಿದಳು, ಹಾಗೆ ಹತ್ತಾರು ಹೆಣ್ಣುಗಳ ಪ್ರೊಫೈಲ್ ಗಳು ನನ್ನ ಮೊಬೈಲ್ ಗ್ಯಾಲರಿಗೆ ಕೆಲವೇ ಕೆಲವು ದಿನಗಳಲ್ಲಿ ಬಂದಿದ್ದುವು.
ಯಾರನ್ನೂ ಒಪ್ಪದ ನಾನು ಆ ಹುಡುಗಿಯನ್ನು ಮೊದಲನೇ ನೋಟದಲ್ಲೇ ಒಪ್ಪಿಕೊಂಡಿದ್ದೆ ಸರ್, ಅವಳೇನು ಅಂತ ಸುಂದರಿಯಲ್ಲ , ಅವರ ಮನೆ ಕಡೆ ಹೇಳಿಕೊಳ್ಳುವಂತಹ ಶ್ರೀಮಂತರು ಅಲ್ಲ ಆದರೂ ಅವಳಲ್ಲಿ ಅದೇನು ನನ್ನನ್ನು ಆಕರ್ಷಿಸಿತ್ತೋ ಅಥವಾ ನನ್ನ ಹಣೆಬರವೇ ಅಲ್ಲಿಂದ ಬದಲಾಗ ಬಯಸಿತ್ತೋ ನನಗೆ ಈವರೆಗೂ ಅರ್ಥವಾಗಿಯೇ ಇಲ್ಲ..
ಅವರ ಮನೆಯಲ್ಲೂ ಕೂಡ ನನ್ನನ್ನು ಅಷ್ಟು ಇಷ್ಟಪಟ್ಟಿದ್ದರು, ತಂದೆ ಇಲ್ಲದ ನನಗೆ ಮಾವನೇ ತಂದೆಯಾಗಿದ್ದರು, ಅತ್ತೆಯಂತೂ ನನ್ನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ,ನನ್ನ ಮಗಳಿಗೆ ಎಂತಹ ಹುಡುಗ ಸಿಕ್ಕಿದ ಅಂತಲೋ ಅಥವಾ ನನ್ನ ಗುಣಕ್ಕೋ ಅವರು ತನ್ನ ಮಗನಿಗಿಂತ ಹೆಚ್ಚಾಗಿ ನನ್ನನ್ನು ಇಷ್ಟಪಡುತ್ತಿದ್ದರು , ಅವರ ಪ್ರೀತಿ ಮತ್ತು ವಿಶ್ವಾಸಗಳ ಮಧ್ಯೆ ಕಳೆದು ಹೋಗಿದ್ದೆ ಸರ್.
ಅದೇ ರೀತಿ ನಾನು ಮದುವೆಯಾಗುವ ಹುಡುಗಿಯನ್ನೂ ಕೂಡ ಇಷ್ಟ ಪಡುತ್ತಿದ್ದೆ, ಸಮಯ ಸಿಕ್ಕಾಗಲೆಲ್ಲಾ ತುಂಬಾ ಮಾತನಾಡುತ್ತಿದ್ದೆ , ಮುಂದಿನ ಭವಿಷ್ಯದ ಬಗ್ಗೆ , ಹುಟ್ಟದೇ ಇರುವ ಮಕ್ಕಳ ಬಗ್ಗೆ, ಅರಿಯದ ನಾಳೆಗಳ ಬಗ್ಗೆ ತುಂಬಾ ಕನಸುಗಳನ್ನು ಅವಳೊಂದಿಗೆ ಹಂಚಿಕೊಳ್ಳುತ್ತಿದೆ.
ನಂತರ ಅದ್ದೂರಿಯಾಗಿ ಮದುವೆಯೂ ನೆರವೇರಿತು, ಆದರೆ ಮದುವೆಯ ನಂತರವೇ ಹೊಸ ಜೀವನ ಶುರುವಲ್ಲವೇ, ಕನಸುಗಳನ್ನು ಕಾಣುವುದು ತುಂಬಾ ಸುಲಭ ಆದರೆ ಗಂಡ ಹೆಂಡತಿ ಜೀವನದಲ್ಲಿ ಜೊತೆಯಾಗಿ ಅವುಗಳನ್ನು ನೆರವೇರಿಸಿಕೊಳ್ಳುವುದು ತುಂಬಾ ಕಷ್ಟ.
ಹೊಸ ಜೀವನ, ಸಂಸಾರದ ಜಂಜಾಟಗಳು , ಜವಾಬ್ದಾರಿಗಳು, ಏರಿಳಿತಗಳು, ಗಲಾಟೆಗಳು ,ಮುನಿಸುಗಳು, ಎಷ್ಟೋ ರಾತ್ರಿ ಮಾತೇ ಆಡದೆ ಮಲಗಿದ ರಾತ್ರಿಗಳು ಎಲ್ಲವೂ ಈಗ ನೆನಪು ಎಂದನು.
ಎರಡು ವರ್ಷದ ನನ್ನ ಸಾಂಸಾರಿಕ ಜೀವನ ಚೆನ್ನಾಗಿಯೇ ಇತ್ತು, ಸಂಸಾರದಲ್ಲಿ ಜಗಳವಿಲ್ಲವೆಂದರೆ ಅಲ್ಲಿ ಪ್ರೀತಿಯಲ್ಲಿಂದ ಸಾಧ್ಯ , ಗಂಡ ಹೆಂಡತಿಯರ ಮಧ್ಯೆ ಆಗಾಗ ಜಗಳಗಳು ಆಗುತ್ತಲೇ ಇರಬೇಕು ವೆಂದರೆ ಸಂಸಾರ ಸಪ್ಪೆ ಎನ್ನಲು ಶುರುವಾಗುತ್ತದೆ , ಅದೇ ರೀತಿ ನನ್ನ ಸಂಸಾರವು ಸಾಗುತ್ತಲೇ ಇತ್ತು, ಆದರೆ ನನ್ನ ಕೆಲಸದ ಒತ್ತಡಗಳ ನಡುವೆ ಹೆಂಡತಿಗೆ ಸಮಯ ಕೊಡಲು ಆಗುತ್ತಿರಲಿಲ್ಲ , ಅದನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ ಅನಿಸಿತ್ತು ನನಗೆ , ಮುಂಬೈಯಂತಹ ಅವಿಶ್ರಾಂತ ಸಿಟಿ ಮತ್ತು ಕಂಪನಿ ಕಲಸದ ಜಂಜಾಟಗಳ ನಡುವೆ ಸಮಯ ಹೇಗೆ ಹೋಗುತ್ತಾ ಇದೆ ಎಂದು ಅರ್ಥವಾಗುತ್ತಲೇ ಇರಲಿಲ್ಲ, ಮನೆಗೆ ಬಂದು ಮಲಗಿಕೊಂಡರೆ ಸಾಕು ಎನ್ನುವಷ್ಟರ ಮಟ್ಟಿಗೆ ಸುಸ್ತಾಗಿ ಬಿಡುತ್ತಿದೆ.
ಆದರೆ ನನಗೆ ಗೊತ್ತೇ ಆಗದ ರೀತಿ ನನ್ನ ಹೆಂಡತಿ ಈ ಜಂಜಾಟಗಳ ನಡುವೆ ಬೇರೆಯವರಿಗೆ ಸೆರಗು ಹಾಸಲು ಶುರು ಮಾಡಿದ್ದಾಳೆ ಎಂದು ಅರ್ಥವಾಗಲೇ ಇಲ್ಲ ಸರ್ ಎಂದಾಗ ನನ್ನ ಹೃದಯ ಚೂರು ಚೂರಾಯ್ತು..
ಆವತ್ತು ನನ್ನದು ನೈಟ್ ಶಿಫ್ಟ್ ಸರ್ , ರಾತ್ರಿ ಎಂಟರಿಂದ ಬೆಳಗ್ಗೆ ಎಂಟರವರೆಗೆ ಡ್ಯೂಟಿ , ಸೋಮವಾರದಿಂದ ಶುಕ್ರವಾರದವರೆಗೆ ಅವಿಶ್ರಾಂತವಾಗಿ ದುಡಿಯಬೇಕಿತ್ತು , ಹಾಗೆಯೇ ಸೋಮವಾರ ಮಂಗಳವಾರ ನೈಟ್ ಡ್ಯೂಟಿ ಮುಗಿದಿತ್ತು, ಬುಧವಾರ ನನ್ನ ಕಂಪನಿಯ ಮುಖ್ಯಸ್ಥರ ಹುಟ್ಟು ಹಬ್ಬವಿತ್ತು, ಎಲ್ಲರನ್ನೂ ಸೇರಿ ಒಂದೊಳ್ಳೆ ಪಾರ್ಟಿ ಮಾಡಿಸಿದ ನಮ್ಮ ಕಂಪನಿಯ ಮುಖ್ಯಸ್ಥರು, ಈ ದಿನ ನೈಟ್ ಶಿಫ್ಟ್ ಗೆ ನನ್ನ ಕಡೆಯಿಂದ ರಜಾ ಎಂದು ಹೇಳಿದಾಗ ಸಮಯ ರಾತ್ರಿ 12 ಗಂಟೆ ಸರ್, ಬೇಗ ಹೋಗಿ ಮಲಗಿಕೊಳ್ಳುವ , ನೆಮ್ಮದಿಯಾಗಿ ನಿದ್ದೆ ಮಾಡುವ, ಹೆಂಡತಿಯ ಜೊತೆ ರಾತ್ರಿಯ ಪಿಸುಮಾತು ಆಡುವ ಎಂದು ತುಂಬಾ ಆಸೆಯಿಂದ ಮನೆಯ ಹತ್ತಿರ ಬಂದು , ಕಾರ್ ಪಾರ್ಕ್ ಮಾಡಿ ಹೊಸ್ತಿಲ ಬಳಿಗೆ ಬಂದೆ ಸರ್, ಮೊದಲ ಬಾರಿಗೆ ನನ್ನ ಎದೆ ಒಡೆದು ಹೋಗುವಂತ , ನನ್ನ ಜೀವನದಲ್ಲಿ ಎಂದು ಊಹಿಸಿಕೊಳ್ಳಲಾಗದಂತಹ ಘಟನೆಯನ್ನು ನೋಡಿಬಿಟ್ಟೆ ಸರ್.
ಯಾರೋ ಒಬ್ಬ ಅಪರಿಚಿತನ ಗಂಡಸಿನ ಚಪ್ಪಲಿ ನಮ್ಮ ಮನೆಯ ಮುಂದೆ ಇದೆ ಎಂದರೆ, ಆದೂ ಅಂತಹ ಮಧ್ಯರಾತ್ರಿಯಲ್ಲಿ ನೋಡಿದಾಗ ಎಂತಹ ಗಂಡಸೇ ಆಗಿದ್ದರೂ ತನ್ನೆಲ್ಲಾ ಗಂಡಸ್ತನವನ್ನು ಆ ಕ್ಷಣದಲ್ಲಿ ಕಳೆದುಕೊಂಡು ಬಿಡುತ್ತಾನೆ, ನನಗೂ ಹಾಗೆ ಆಗಿತ್ತು , ನನ್ನ ಎದೆಯಲ್ಲಿ ಚಮ್ಮಾರ ಚಪ್ಪಲಿ ಹೊಲಿಯುವ ಹಾಗೆ ಅನುಭವವಾಗಲು ಶುರುವಾಯಿತು.
ಯಾಕೋ ಮನೆಯ ಒಳಗಡೆ ಹೋಗಬೇಕು ಅನ್ನಿಸಲೇ ಇಲ್ಲ ಸರ್ , ಬೆಡ್ರೂಮಿನಲ್ಲಿ ಲೈಟ್ ನೋಡಿ ಎರಡು ದೇಹದ ನೆರಳುಗಳ ಮಿಲನವನ್ನು ನೋಡಿ , ಮಾತೆ ಬಾರದೆ ಹಾಗೆಯೇ ಕುಸಿದು ಕುಳಿತುಕೊಂಡುಬಿಟ್ಟೆ ನಾನು , ಅವತ್ತು ನಾನು ಮನೆಗೆ ಹೋಗಿದ್ದ ಸಮಯ 12:30, ಬೆಳಗಿನ ಜಾವ ಐದು ಗಂಟೆವರೆಗೂ ಹಾಗೆ ಬಾಗಿಲ ಬಳಿ, ಸುಮ್ಮನೆ ಕುಳಿತಿದ್ದೆ ಸರ್.
ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಬಾಗಿಲು ತೆಗೆದು ಯಾರೋ ಗಂಡಸು ಬಂದಂತಾಯಿತು, ಅವನ ಕಾಲಿಗೆ ನಾನು ತಾಗಿ ಎದುರು ಬೀಳುವಂತಾದನು ಅವನು, ಏನೂ ಗೊತ್ತಿಲ್ಲದವನಂತೆ ಮೇಲೆದ್ದೆ, ತಲೆ ಬಾಗಿಸಿಕೊಂಡು ಓಡಿಯೇ ಬಿಟ್ಟ ಆ ವ್ಯಕ್ತಿ, ಯಾರೆಂದು ತಿಳಿಯುವ ಕುತೂಹಲವಾಗಲಿ, ಹೊಡೆದು ಸಾಯಿಸಿಬಿಡಬೇಕು ಎನ್ನುವ ಸಿಟ್ಟಾಗಲಿ ಬರಲೇ ಇಲ್ಲ ಸರ್ , ಎಲ್ಲವೂ ಮುಗಿದ ಮೇಲೆ ನಂಬಿಕೆಯ ಮೇಲೆ ಪೆಟ್ಟು ಬಿದ್ದಾದ ಮೇಲೆ ಏನು ಮಾಡಿದರೆ ಏನು ಪ್ರಯೋಜನ.
ನಂತರ ಮನೆಯ ಒಳಗೆ ಹೋದವನು ಮಲಗಲು ನನ್ನ ಬೆಡ್ರೂಮಿಗೆ ಹೋಗಲು ಮನಸ್ಸಾಗಲಿಲ್ಲ , ಸುಮ್ಮನೆ ಹಾಲಿನಲ್ಲಿ ಮಲಗಿಬಿಟ್ಟೆ, ಹೆಂಡತಿಯೂ ಕೂಡ ಹತ್ತಿರ ಬಂದು ಮಾತನಾಡಿಸುವ ಪ್ರಯತ್ನವನ್ನು ಮಾಡಲಿಲ್ಲ ಹೇಗೆ ಪ್ರಯತ್ನ ಪಟ್ಟಾಳು..??
ಒಂದು ವಾರ ಇಬ್ಬರೂ ಮಾತನಾಡಲೇ ಇಲ್ಲ, ಒಂದು ದಿನ ನಾನೆ ಅವಳ ಹತ್ತಿರ ಹೋಗಿ ಎದುರು ಕೂತು ನನ್ನ ಮನಸ್ಸಿನಲ್ಲಿ ಇದ್ದದ್ದನ್ನು ಹೇಳಿಬಿಟ್ಟೆ,
ನೋಡು ನನಗೆ ಹೆಂಡತಿ ಎಂದರೆ ಕೇವಲ ಮುದ್ದಾಗಿ ಸೀರೆ ತೊಟ್ಟುಕೊಂಡು ,ಕೈ ತುಂಬಾ ಬಳೆ ಹಾಕಿಕೊಂಡು ಕಾಣುವಂತಹ ಹೆಂಗಸಲ್ಲ , ನನ್ನ ಎರಡನೇ ತಾಯಿ ಅಂದುಕೊಂಡವನು ನಾನು, ಆದರೆ ತಾಯಿಯ ಸ್ಥಾನವನ್ನು ನಿನಗೆ ಇನ್ನೂ ಮುಂದೆ ತುಂಬಲು ಅಸಾಧ್ಯ , ಅದಕ್ಕಿಂತ ಹೆಚ್ಚಾಗಿ ಬೇರೆಯವರು ಮುಟ್ಟಿದ ದೇಹವನ್ನು ನಾನು ಮತ್ತೆಂದು ಮುಟ್ಟುವುದಿಲ್ಲ, ನಂಬಿಕೆ ಎನ್ನುವುದು ಸುಮ್ಮನೆ ಎಲ್ಲರ ಮೇಲೂ ಬರುವುದಿಲ್ಲ, ಅದನ್ನು ಗಳಿಸುವುದು ಎಷ್ಟು ಕಷ್ಟವೋ ,ಉಳಿಸಿಕೊಳ್ಳುವುದು ಅದಕ್ಕಿಂತಲೂ ತುಂಬಾ ಕಷ್ಟ, ನಿನ್ನ ಮೇಲೆ ಆ ನಂಬಿಕೆ ಇನ್ನೂ ಎಂದಿಗೂ ಸಾಧ್ಯವಿಲ್ಲ , ನಿನಗೆ ಹೊಡೆದು ಬೈದು ಬುದ್ಧಿ ಹೇಳುವುದು ಇನ್ನೂ ಅವಶ್ಯಕತಯಿಲ್ಲ ಎನಿಸುತ್ತದೆ ನನಗೆ. ನಿನ್ನ ಜೀವನವನ್ನು ನೀನು ನೋಡಿಕೋ. ಮತ್ತೆಂದೂ ನನ್ನ ಮುಂದೆ ಬರಬೇಡ, ಜೀವವಿರುವ ತನಕ ನಿನ್ನ ಮುಂದೆ ನಾನು ಬರುವುದಿಲ್ಲ ಎಂದು ಕೊನೆಯ ಬಾರಿ ಕೈಮುಗಿದು ಅಲ್ಲಿಂದ ಹೊರಟುಬಿಟ್ಟೆ.
ಆದರೆ ಅಲ್ಲಿಂದ ಹೊರಟ ನಂತರವೇ ನನಗೆ ಹೊಸ ಜೀವನ ಅನುಭವವಾಗಿದ್ದು ಸರ್, ಒಬ್ಬ ಹೆಂಗಸು ಗಂಡನನ್ನು ಬಿಟ್ಟು ಬದುಕಬಹುದು , ಹೆಂಗಸೇ ಹಾಗೆ ಅವಳಿಗೆ ದೇವರು ಅಂತ ಹೋರಾಟದ ಶಕ್ತಿಯನ್ನು ನೀಡಿರುತ್ತಾನೆ. ಆದರೆ ಹೆಂಡತಿ ಬಿಟ್ಟ ಗಂಡಸು ಒಂಟಿಯಾಗಿ ಬದುಕುವುದು ಕಷ್ಟ ಸಾಧ್ಯ.
ಒಂದು ವರ್ಷದವರೆಗೂ ಅಲ್ಲಿ ಇಲ್ಲಿ ತಿರುಗಾಡಿಕೊಂಡು, ಕೆಲಸ ಮಾಡಿಕೊಂಡು ,ಸಿಕ್ಕಿದ ಕಡೆ ಹೊಟ್ಟೆಗೆ ಸ್ವಲ್ಪ ತಿಂದುಕೊಂಡು, ರಾತ್ರಿ ಯಾವುದೋ ಜಾಗದಲ್ಲಿ ಮಲಗಿಕೊಂಡು ಕಾಲ ಕಳೆದೆ ಸರ್.
ಯಾಕೋ ಅವಳನ್ನು ಮರೆಯಲು ಆಗಲೇ ಇಲ್ಲ, ಎಷ್ಟೋ ಬಾರಿ ಅವಳನ್ನು ಒಂದು ಸಾರಿ ನಾನು ಕ್ಷಮಿಸಬಹುದಿತ್ತು , ತಿದ್ದಿ ಬುದ್ದಿ ಹೇಳಬಹುದಿತ್ತು ಅನ್ನಿಸಿದೆ ಆದರೆ ಕಣ್ಣಾರೆ ನೋಡಿದ ದೃಶ್ಯಗಳು ನನ್ನನ್ನು ಪ್ರತಿಸಾರಿಯೂ ಚುಚ್ಚಿ ಚುಚ್ಚಿ ಕೊಲ್ಲುತ್ತಲೇ ಇದ್ದವು.
ನೋಡಿ ಸರ್ ಈಗ ಹೇಗಿದ್ದೇನೆ, ಹುಚ್ಚನ ರೀತಿ ಅಲೆಯುತ್ತಿದ್ದೇನೆ, ಸಮಾಜಕ್ಕೆ ನಾನೊಬ್ಬ ಹುಚ್ಚನಂತೆ ಆದರೆ ಯಾರು ನನ್ನನ್ನು ಗೆಳೆಯನೇ ರೀತಿ ನೋಡಲೇ ಇಲ್ಲ , ಯಾವ ಜನ್ಮದಲ್ಲಿ ನಿಮ್ಮ ಮಗನಾಗಿ ಹುಟ್ಟಿದ್ದನೋ ಗೊತ್ತಿಲ್ಲ , ನೀವು ನನಗೆ ಎಂದೋ ಕಳೆದುಹೋಗಿದ್ದ ಪ್ರೀತಿಯನ್ನು ತೋರಿಸಿದ್ದೀರಿ. ನನಗೂ ನನ್ನ ಕಥೆಯನ್ನು ಹೇಳಿಕೊಳ್ಳಬೇಕು ಅನ್ನಿಸುವ ಮಟ್ಟಿಗೆ ಗೆಳೆತನ ಬೆಳೆಸಿಕೊಂಡಿದ್ದೀರಿ , ಎಷ್ಟೋ ಸಾರಿ ಅನ್ನಿಸಿದೆ ನನಗೆ ನಿಮ್ಮಂಥ ಯಾವುದೇ ವ್ಯಕ್ತಿ ಆ ಘಟನೆ ನಡೆದ ದಿನ ಸಿಕ್ಕಿದ್ದರೆ, ಸ್ವಲ್ಪ ಬುದ್ಧಿ ಹೇಳಿದ್ದರೆ ಈ ಸ್ಥಿತಿಗೆ ನಾನು ಬರುತ್ತಿರಲಿಲ್ಲವೇನೋ ಆದರೆ ಕಾಲ ಮಿಂಚಿದೆ ಅಲ್ವೇ ಸರ್ ಎಂದನು.
ನಾನು ಕುತೂಹಲದಿಂದ ಕೇಳಿದೆ, ಮತ್ತೊಮ್ಮೆ ನಿಮ್ಮ ಹೆಂಡತಿಯನ್ನು ನೋಡಬೇಕು ಅನ್ನಿಸಲಿಲ್ಲವ ನಿನಗೆ ಎಂದು,
ತುಂಬಾ ಬಾರಿ ನೋಡಬೇಕು ಅನ್ನಿಸಿತ್ತು ಸರ್ , ಆದರೆ ಎಲ್ಲಿ ಹುಡುಕಲಿ , ಮತ್ತೆಂದು ಸಿಗಲಾರದಂತೆ ದೂರವಾಗಿಬಿಟ್ಟಿದ್ದಳು ಎಂದು ಕಣ್ಣೀರು ಒರೆಸಿಕೊಂಡನು.
ಕೆಲವು ಹೆಂಗಸರು ಯಾಕೆ ಹೀಗೆ ಸರ್.?
ಗಂಡ ನಂಬಿಕೆ ಇಟ್ಟು ದುಡಿತ ಇರುತ್ತಾನೆ ಎಂದರೆ ತನ್ನನ್ನು ನಂಬಿ ಬಂದಿರುವ ಹೆಂಡತಿಗೋಸ್ಕರವಲ್ಲವೇ.?
ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದಲ್ಲವೇ.?
ತಾನು ಹಸಿವಿನಿಂದ ಮಲಗಿಕೊಂಡರೂ ತನ್ನ ಹೆಂಡತಿ ಹೊಟ್ಟೆ ತುಂಬಿಸಬೇಕು ಎಂದಲ್ಲವೇ.?
ತಾನು ಮಾಸಿದ ಬಟ್ಟೆ ಉಟ್ಟುಕೊಂಡರೂ ತನ್ನ ಮಡದಿ ಎಲ್ಲರ ಮುಂದೆ ಚೆನ್ನಾಗಿ ಕಾಣಬೇಕು ಎಂಬ ಕನಸಿಗೋಸ್ಕರವಲ್ಲವೇ.?
ತನ್ನ ಕನಸುಗಳನ್ನು ಬದಿಗಿಟ್ಟು ತಾನು ದುಡಿಯುವುದರಲ್ಲೇ ಸ್ವಲ್ಪ ಸ್ವಲ್ಪ ಕೂಡಿಡುವುದು ಹೆಂಡತಿ ಮಕ್ಕಳು ಚೆನ್ನಾಗಿರಬೇಕು ,ಅವರ ಭವಿಷ್ಯ ಚೆನ್ನಾಗಿರಬೇಕೆಂದಲ್ಲವೇ.?
ಯಾಕೆ ಸರ್.?
ಇಂತಹ ಹೆಂಗಸರಿಗೆ ತನ್ನ ಗಂಡನ ತ್ಯಾಗ ಅರ್ಥವಾಗುವುದಿಲ್ಲವೇಕೆ, ಎಂದು ಆ ಅಪರಿಚಿತ ಮನುಷ್ಯ ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಅಂದು ಇರಲಿಲ್ಲ..ಎಂದು ಇಲ್ಲ..!
ಕತ್ತಲೆಯಲ್ಲಿ ಆ ಹೆಂಗಸು ತನ್ನ ಗಂಡನ ಪ್ರೀತಿಯನ್ನು ಧಿಕ್ಕರಿಸಿ ಪ್ರಿಯಕರನ ಎದುರು ಬೆತ್ತಲಾಗಿದ್ದಳು.
ಗಂಡ ತನ್ನ ಸರ್ವಸವನ್ನೂ ಹೆಂಡತಿಗೋಸ್ಕರ ತ್ಯಾಗ ಮಾಡಿ ಸಮಾಜದ ಎದುರಿನ ಬೆಳಕಿನಲ್ಲಿ ಪ್ರೀತಿಸಿ ಬೆತ್ತಲಾಗಿದ್ದನು.
ಆ ಪ್ರಿಯಕರ ಕಾಮವೇ ತುಂಬಿದ ಪ್ರೀತಿಯಲ್ಲಿ ಬೇರೊಬ್ಬರ ಸಂಸಾರಕ್ಕೆ ಹುಳಿ ಹಿಂಡುವ ಕಾರ್ಯದಲ್ಲಿ ಬೆತ್ತಲಾಗಿದ್ದನು.
ಯಾರಿಗೆ ಯಾರು ಮೋಸ ಮಾಡಿದರೋ,,
ಒಟ್ಟಿನಲ್ಲಿ ಎಲ್ಲರೂ ಪ್ರೀತಿಸಿ ಬೆತ್ತಲಾಗಿದ್ದರು..!!
– ಅಪರಿಚಿತ ಮೌನಿ

[…] ಪ್ರೀತಿಸಿ ಬೆತ್ತಲಾದವಳು..!! […]