
ಕರ್ನಾಟಕದ ಖ್ಯಾತ ಸಾಹಿತಿ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳಾಗಿರುವ ಅನನ್ಯ ಪ್ರಸಾದ್ ಒಬ್ಬಂಟಿಯಾಗಿ ದೋಣಿಯಲ್ಲಿ ಹುಟ್ಟು ಹಾಕುತ್ತಾ ಅಟ್ಲಾಂಟಿಕ್ ಸಮುದ್ರದಲ್ಲಿ 3000ಕಿ.ಮೀ ದೂರವನ್ನು ಯಶಸ್ವಿಯಾಗಿ ಕ್ರಮಿಸಿದ ಮೊದಲ ಕಂದುವರ್ಣೀಯ ಮಹಿಳೆ ಎಂಬ ಅದ್ಭುತವನ್ನು ಸಾಧಿಸಿ ಈ ಬಗೆಯ ಸಾಹಸಗಳಿಗೆ ಸ್ಫೂರ್ತಿದಾಯಕ ಮುನ್ನುಡಿಯನ್ನು ಬರೆದಿದ್ದಾರೆ.
ಕಳೆದ ಡಿಸೆಂಬರ್ 11 ರಂದು ಶುರುವಾದ ಈ ಯಾನ ಜನೆವರಿ 31 ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಕರ್ನಾಟಕ ಮೂಲದ ಅನನ್ಯ ಯು ಕೆ ಯಲ್ಲಿ ನೆಲೆಸಿರುವ ಡಾ ಶಿವಪ್ರಸಾದ್ ಹಾಗೂ ಡಾ ಪೂರ್ಣಿಮಾ ಪ್ರಸಾದ್ ಅವರ ಮಗಳು.
ಏಕಾಂಗಿ ಯಾನ ಕೈಗೊಂಡ ಅನನ್ಯ ಪ್ರಸಾದ್ ಅವರು ಭರ್ತಿ 52 ದಿನ 5 ಗಂಟೆ 44 ನಿಮಿಷಗಳಲ್ಲಿ ಜಗತ್ತಿನಲ್ಲೇ ಅತ್ಯಂತ ಕಠಿಣ ಸಮುದ್ರ ಮಾರ್ಗದ ರೋಯಿಂಗ್ ಮಾಡಿದ್ದಾರೆ. ಈ ಸಮುದ್ರಯಾನದ ಮೂಲಕ ದಕ್ಷಿಣ ಭಾರತದಲ್ಲಿ ಅನಾಥ ಮಕ್ಕಳಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ “ದೀನಬಂಧು ಟ್ರಸ್ಟ್”, ಹಾಗೂ ಇಂಗ್ಲೆಂಡಿನಲ್ಲಿ “ಮಾನಸಿಕ ಆರೋಗ್ಯ ಪ್ರತಿಷ್ಠಾನ”ಕ್ಕೆ ತಮ್ಮ ಸಾಹಸದ ಮೂಲಕ ಬೆಂಬಲ ನೀಡಿದ್ದಾರೆ. ಅನನ್ಯ ಅವರ ಧೀಮಂತ ವ್ಯಕ್ತಿತ್ವಕ್ಕೆ ಹಾಗೂ ಅವರ ವಿಶ್ವದಾಖಲೆಗೆ ಅಭಿನಂದನೆಗಳು.