ನನ್ನವಳಿಗೆ ಗಡದ್ದು ನಿದ್ದೆ
ನನಗೆ ದುಗುಡ ಸುದ್ದಿ
ಇರಾನ್ ಇಸ್ರೇಲ್ ಅಮೇರಿಕಾ ದೇಶಗಳ ಕದನ
ಬಾಂಬ್ ಸುರಿಮಳೆಯ ಸದ್ದು
ದಿನನಿತ್ಯದ ವಾರ್ ಗಿತ್ತಿಯರ ಧಾರಾವಾಹಿ ನೋಡಿ ಮಡದಿ ಕಣ್ತುಂಬಿ ಮಲಗಿದ್ದಾಳೆ
ನನಗೆ ತಡೆಯಲಾಗದೆ ತಿವಿದೆಬ್ಬಿಸಿ ಕೇಳಿದೆ
ಮಧ್ಯಪ್ರಾಚ್ಯದ ಯುದ್ದದ ಪರಿಣಾಮ ಗೊತ್ತೇನೇ
ಥೂ ಮಧ್ಯದ ವಾಸನೆ ಆ ಕಡೆ ತಿರುಗಿ ಮಲಗಿ
ಗಬ್ಬುನಾಥ ಹೇ ವಿಶ್ವನಾಥ
ಮಂಪರು ನಿದ್ರೆಯಲ್ಲೂ ದೇವರ ನೆನೆದಳು
ನನ್ನಾಕೆ ಪತ್ರಿಕೆ ಓದುವವಳಲ್ಲ
ಅವಳದೇ ಗೋಳಿನ ನಡುವೆ
ಟಿವಿ ಧಾರಾವಾಹಿ ನೋಡುತ್ತಾಳೆ
ನೋಡ್ರೀ ಅದೆಂತಹ ಕೆಟ್ಟ ಸೊಸೆ
ಅತ್ತೇನೇ ಮನೆಯಿಂದ ಆಚೆಗೆ ಹಾಕಿದ್ದಾಳೆ ತಾಟಗಿತ್ತಿ
ಈಗೇನು ನಾನು ಆಚೆಗೆ ಹೋಗಲೇ
ರೀ, ಬೆಳಿಗ್ಗೆ ದೋಸೆ ಉಯ್ಯಲು ಒಳ್ಳೆಣ್ಣಿ ಇಲ್ಲ
ಒಳ್ಳೆ ಸಮಯ ನೋಡಿ ಬೇಡಿಕೆ ಇಡುತ್ತಾಳೆ
ನನಗೆ ನಾಳೆಗೆ ಗಾಡಿಗೆ ಪೆಟ್ರೋಲ್ ಚಿಂತೆ
ಅಲ್ಲಿ ಯುದ್ದ ನೆಡೆದರೆ ಇಲ್ಲಿ ಬೆಲೆ ಏರಿಕೆ
ಚಿನ್ನದ ಬೆಲೆ ಗಗನಕ್ಕೆ ಏರಿದೆ
ಅವಳ ಸರ ಸವೆದಿದೆಯಂತೆ
ಅದನ್ನು ಮುರಿಸಿ ಗಟ್ಟಿದು ಮಾಡಿಸಿಕೊಡಿ ಎಂದು ನಿತ್ಯ ಪೀಡಿಸುತ್ತಿದ್ದಾಳೆ
ಯುದ್ದ ಮುಗಿಯಲಿ ತಡಿ ಚಿನ್ನ ಎನ್ನುತ್ತಿದ್ದೇನೆ
ಅಡಿಗೆ ಗ್ಯಾಸ್ ಬೆಲೆ ಏರಿದೆ
ಕೊಟ್ಟುಬಿಡಿ ನೋಬಲ್ ಪ್ರೈಜ್ ಟ್ರಂಪಿಗೆ
_

ಗೊರೂರು ಅನಂತರಾಜು
ಹಾಸನ
9449462879
