ತುಮಕೂರು: ತುಮಕೂರು ನಗರದ ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮರಥೋತ್ಸವದ ಅಂಗವಾಗಿ ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜೆಗಳು, ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಬಳಿಕ ಆಂಜನೇಯಸ್ವಾಮಿಯ ಉತ್ಸವಮೂರ್ತಿಯನ್ನು ಭವ್ಯ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ಈ ವೇಳೆ ಜಯಘೋಷಗಳ ನಡುವೆ ಭಕ್ತರು ಭಕ್ತಿಭಾವದಿಂದ ರಥ ಎಳೆದು ಸಂಭ್ರಮಿಸಿದರು.
ರಥೋತ್ಸವಕ್ಕೆ ರಾಜ್ಯಾದ್ಯಂತದಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಾಗೂ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಶ್ರೀಮತಿ ಪಿ.ಎಸ್. ರಾಜೇಶ್ವರಿ, ರಾಜಸ್ವ ನಿರೀಕ್ಷಕ ಶಿವಾನಂದ ರೆಡ್ಡಿ, ಗ್ರಾಮ ಆಡಳಿತಾಧಿಕಾರಿ ಎನ್. ರವಿಕುಮಾರ್, ಗ್ರಾಮ ಸಹಾಯಕ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
