ಶಿವಮೊಗ್ಗ:ಮಹಾಭಾರತವು ಯುದ್ಧವನ್ನು ಮಹಿಮೆಪಡಿಸುವ ಕಾವ್ಯವಲ್ಲ, ಅದು ಯುದ್ಧ ವಿರೋಧಿ ಮಹಾಕಾವ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಹಾಗೂ ಅದರ ಜಿಲ್ಲಾ ಘಟಕ ಶಿವಮೊಗ್ಗ ಇವರ ಆಶ್ರಯದಲ್ಲಿ ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟದ ಬಸವ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಐದನೆಯ ಕವಿ–ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾಭಾರತದ ಯುದ್ಧವು ಸಹೋದರರ ನಡುವಿನ ವಿನಾಶಕಾರಿ ಸಂಘರ್ಷವಾಗಿದ್ದು, ಯುದ್ಧ ತಡೆಯಲು ಶ್ರೀಕೃಷ್ಣ ಎಷ್ಟೇ ಪ್ರಯತ್ನಪಟ್ಟರೂ ಅದು ತಪ್ಪಲಿಲ್ಲ. ಯುದ್ಧದ ಪರಿಣಾಮವಾಗಿ ಅನೇಕ ರಾಜವಂಶಗಳು ನಾಶವಾದವು.

ಯುದ್ಧಾನಂತರ ಭಾರತದ ಸ್ಥಿತಿಗತಿಗಳನ್ನು ನೋಡಿದರೆ ಯುದ್ಧ ಎಂದಿಗೂ ಬೇಡ ಎಂಬ ಸಂದೇಶವೇ ಮಹಾಭಾರತ ನೀಡುತ್ತದೆ ಎಂದರು.

ಮನುಷ್ಯ ಮೂಲತಃ ಶಾಂತಿಪ್ರಿಯ. ಶಾಂತಿಯ ಹುಡುಕಾಟದಲ್ಲೇ ಕಲೆ, ಸಾಹಿತ್ಯ, ಸಂಗೀತಗಳ ಉದಯವಾಗಿದೆ. ಕಾವ್ಯವು ಗದ್ಯಕ್ಕಿಂತ ಮೊದಲು ಹುಟ್ಟಿದ್ದು, ಕನ್ನಡ ಸೇರಿದಂತೆ ಭಾರತದ ಭಾಷೆಗಳು ಹಲವು ಸಂಸ್ಕೃತಿಗಳನ್ನು ಒಳಗೊಂಡು ಬೆಳೆದಿವೆ.

ಏಕ ಸಂಸ್ಕೃತಿಗಿಂತ ಬಹು ಸಂಸ್ಕೃತಿಯೇ ಶ್ರೇಷ್ಠ ಎಂದು ಅಭಿಪ್ರಾಯಪಟ್ಟರು. ಪಂಪ ರಾಜಸತ್ತೆಯನ್ನು ಪ್ರಶ್ನಿಸಿದರೆ, ಬಸವಣ್ಣ 12ನೇ ಶತಮಾನದಲ್ಲೇ ಶ್ರಮಜೀವಿಗಳ ಕಾಯಕವನ್ನು ಪವಿತ್ರವೆಂದು ಸಾರಿದರು ಎಂದು ಹೇಳಿದರು.

ಕವಿಗಳಿಗೆ ದ್ವೇಷವಿಲ್ಲ, ಪ್ರೀತಿಯೇ ಅವರ ಧರ್ಮ. ಯಾವ ಧರ್ಮವನ್ನಾದರೂ ದ್ವೇಷಿಸಲು ಹೊರಟಾಗ, ಆ ಧರ್ಮದ ಕವಿ ನಮ್ಮ ಮುಂದೆ ಪ್ರೀತಿಯನ್ನು ನಿಲ್ಲಿಸುತ್ತಾನೆ. “ಪ್ರೀತಿ ಎಂಬ ರೋಗಕ್ಕೆ ಮದ್ದು ಸಿಗದಿರಲಿ” ಎಂಬ ಮಾತು ಕಾವ್ಯದ ಆತ್ಮವನ್ನು ಹೇಳುತ್ತದೆ ಎಂದರು. ಕಷ್ಟದ ಕಾಲದಲ್ಲೇ ಶ್ರೇಷ್ಠ ಕಾವ್ಯ ಹುಟ್ಟುತ್ತದೆ ಎಂಬುದನ್ನೂ ಅವರು ಒತ್ತಿ ಹೇಳಿದರು.

ಸಮ್ಮೇಳನದ ಅಧ್ಯಕ್ಷರ ಕುರಿತು ಕುವೆಂಪು ವಿ.ವಿ. ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಮಾತನಾಡಿದರು. ತುಮಕೂರಿನ ಡಾ. ಶೈಲಾ ನಾಗರಾಜ್ ಅವರು ಸರ್ವಾಧ್ಯಕ್ಷರಿಗೆ ಗೌರವ ಸಮರ್ಪಿಸಿದರು.
ಲೇಖಕಿ ಸಬಿತಾ ಬನ್ನಾಡಿ ಮಾತನಾಡಿ, ಕಥೆ–ಕವನಗಳು ಸ್ವತಂತ್ರವಾಗಿ ಹೊರಹೊಮ್ಮಬೇಕು. ಭಯವಿಲ್ಲದೆ ಬರವಣಿಗೆ ಮಾಡುವ ಧೈರ್ಯವೇ ಸಾಹಿತ್ಯದ ಜೀವಾಳ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಜಾನ್ ದರ್ಗಾ ಮಾತನಾಡಿ, ಶರಣ ಸಂಸ್ಕೃತಿ ಒಳಗೊಳ್ಳುವ ಸಂಸ್ಕೃತಿಯಾಗಿದೆ. “ಇವನಾರವ ಇವನಾರವ ಎನ್ನದಿರಯ್ಯ” ಎಂಬ ಬಸವಣ್ಣನ ವಚನವೇ ನಮ್ಮ ನಾಡಿನ ಆತ್ಮ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಶ್ಮಿ ಕೆ. ವಿಶ್ವನಾಥ ಬರೆದ “ಸ್ಪೂರ್ತಿಯ ಚಿಲುಮೆ – ಸುಧಾ ಮೂರ್ತಿ” ಪುಸ್ತಕವನ್ನು ಹಾಸನದ ಪತ್ರಕರ್ತ ನಾಗರಾಜ್ ಹೆತ್ತೂರು ಲೋಕಾರ್ಪಣೆ ಮಾಡಿದರು.
ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನ
ಈ ಸಂದರ್ಭದಲ್ಲಿ ಎಂಟು ಜನ ಸಾಧಕರಿಗೆ ವಿವಿಧ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ್ ಸೇರಿದಂತೆ ಸಾಹಿತಿಗಳು, ಸಂಶೋಧಕರು ಹಾಗೂ ಸಮಾಜಸೇವಕರಿಗೆ ಗೌರವ ಲಭಿಸಿತು.
ಸಮ್ಮೇಳನವನ್ನು ಕುವೆಂಪು ವಿ.ವಿ. ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ ಉದ್ಘಾಟಿಸಿದರು. ವೇದಿಕೆಯ ಜಿಲ್ಲಾ ಅಧ್ಯಕ್ಷೆ ಡಾ. ಹಸೀನಾ ಎಚ್.ಕೆ. ಸ್ವಾಗತಿಸಿ, ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕ ನುಡಿದರು. ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ವಾರ್ಷಿಕ ವರದಿ ಮಂಡಿಸಿದರು.

ಮಧ್ಯಾಹ್ನದ ನಂತರ ಮೂರು ಕಡೆ ಕವಿಗೋಷ್ಠಿಗಳು ನಡೆದವು. ಪ್ರತಿ ಗೋಷ್ಠಿಯಲ್ಲೂ ತಲಾ 30 ಕವಿಗಳು ಭಾಗವಹಿಸಿದ್ದು, ಒಂದೇ ವೇಳೆ ಇಷ್ಟೊಂದು ಕವಿಗಳು ಕುವೆಂಪು ವಿವಿಯಲ್ಲಿ ಕವನ ವಾಚನ ಮಾಡಿದುದು ಇದೇ ಮೊದಲು ಎಂದು ಸಮ್ಮೇಳನಾಧ್ಯಕ್ಷ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಟ್ರಸ್ಟಿ ಡಾ. ನಾರಾಯಣ ನಿರೂಪಿಸಿದರು. ವೇದಿಕೆಯ ಟ್ರಸ್ಟಿಗಳಾದ ಬಸವರಾಜ್, ದೇಸು ಆಲೂರು, ಸಮುದ್ರವಳ್ಳಿ ವಾಸು, ಡಾ. ಉಮರ್ ಬೀಜದಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
