ಅಕ್ರಮ ಸಂಬಂಧಗಳನ್ನು ಪತ್ತೆಹಚ್ಚಲು ಮೊಬೈಲ್ ಕರೆಗಳು, ಚಾಟ್ಗಳು ಅಥವಾ ರಹಸ್ಯ ಪತ್ತೇದಾರರ ನೆರವು ಸಾಮಾನ್ಯ. ಆದರೆ, ಲಂಡನ್ನ ಮಹಿಳೆಯೊಬ್ಬರು ತನ್ನ ಪತಿಯ ಅಕ್ರಮ ಸಂಬಂಧವನ್ನು ಎಲೆಕ್ಟಿಕ್ ಟೂತ್ಬ್ರಷ್ ಮೂಲಕ ಬಯಲು ಮಾಡಿ ಎಲ್ಲರನ್ನೂ ದಿಗ್ಧಮೆಗೊಳಿಸಿದ್ದಾರೆ.ನಂಬಲು ಕಷ್ಟವಾದರೂ, ಇದು ನಿಜ !
ಪತಿಯ ಬದಲಾದ ವರ್ತನೆ
ಪತಿ ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷಿಸುವುದು, ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುವುದು, ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ತನ್ನ ಬಗ್ಗೆ ಅತಿಯಾದ ಗಮನ ಕೊಡುವುದು ಈ ಮಹಿಳೆಗೆ ಅನುಮಾನ ಮೂಡಿಸಿತ್ತು. ‘ಏನೋ ಸರಿ ಇಲ್ಲ’ ಎಂದು ಅನಿಸಿದರೂ, ಯಾವುದೇ ಖಚಿತ ಸಾಕ್ಷ್ಯ ಇರಲಿಲ್ಲ. ಹೀಗಾಗಿ ಅವರು ಖಾಸಗಿ ಪತ್ತೇದಾರರ ಸಹಾಯ ಪಡೆದರು. ಇಲ್ಲಿಂದಲೇ ರಹಸ್ಯ ಬಯಲಾಗಲು ಶುರುವಾಗಿದ್ದು.
ಟೂತ್ಬ್ರಷ್ ಆಪ್ನಲ್ಲಿ ಸಿಕ್ಕಿಬಿದ್ದ ಪತಿ
ಮಹಿಳೆ ಕೆಲವು ದಿನಗಳಿಂದ ಎಲೆಕ್ಟ್ರಿಕ್ ಟೂತ್ಬ್ರಷ್ ಬಳಸುತ್ತಿದ್ದರು ಮತ್ತು ಅದಕ್ಕೆ ಸಂಪರ್ಕ ಹೊಂದಿದ್ದ ಆಯಪ್ ಮೂಲಕ ಮಕ್ಕಳ ಬ್ರಷ್ ಮಾಡುವ ವಿಧಾನವನ್ನೂ ಗಮನಿಸುತ್ತಿದ್ದರು. ಒಂದು ದಿನ, ಅವರು ತಮ್ಮ ಪತಿಯ ಬ್ರಷ್ ಮಾಡುವ ಅವಧಿಯನ್ನು ಟ್ರ್ಯಾಕ್ ಮಾಡಿದರು. ಅಲ್ಲಿ ಕಂಡದ್ದು ಅವರನ್ನು ದಿಗ್ಭ್ರಮೆಗೊಳಿಸಿತು. ಪತಿ ಕಚೇರಿಯಲ್ಲಿ ಇರುವುದಾಗಿ ಹೇಳಿದ ಸಮಯದಲ್ಲಿಯೇ ಬ್ರಷ್ ಮಾಡುತ್ತಿದ್ದುದು ಆಯಪ್ನಲ್ಲಿ ಸ್ಪಷ್ಟವಾಗಿ ದಾಖಲಾಗಿತ್ತು.
ಕೊನೆಗೂ ಬಯಲಾದ ಸತ್ಯ
ಪತ್ತೇದಾರರ ತನಿಖೆಯಿಂದ, ಪ್ರತಿ ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಪತಿ ತನ್ನ ಗೆಳತಿಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದರು ಎಂಬುದು ಗೊತ್ತಾಯಿತು. ಮಹಿಳೆ ಈ ಸಾಕ್ಷ್ಯಗಳನ್ನು ಸಂಗ್ರಹಿಸಿ, ಪತಿಯನ್ನು ನೇರವಾಗಿ ಪ್ರಶ್ನಿಸಿದಾಗ, ಆತ ತನ್ನ ಅಕ್ರಮ ಸಂಬಂಧವನ್ನು ಒಪ್ಪಿಕೊಂಡಿದ್ದಾನೆ. ಟೂತ್ಬ್ರಷ್ನಂತಹ ಸಣ್ಣ ಉಪಕರಣವೂ ಅಕ್ರಮ ಸಂಬಂಧವನ್ನು ಬಯಲು ಮಾಡಬಲ್ಲದು ಎಂಬುದು ಈ ಘಟನೆಯಿಂದ ಸಾಬೀತಾಗಿದೆ.
