ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಕುರಿತು ಗೃಹ ಇಲಾಖೆ ನೀಡಿರುವ ವರದಿ ಆತಂಕ ಮೂಡಿಸಿದೆ. 1,888 ಪ್ರಕರಣಗಳು ದಾಖಲಾಗಿದ್ದು, 2,143 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದರೂ ಒಂದೂ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
2023ರಿಂದ 2025ರ ಜುಲೈವರೆಗೆ ಒಟ್ಟು 1,888 ಪ್ರಕರಣಗಳು ದಾಖಲಾಗಿದ್ದು, 2023ರಲ್ಲಿ 600 ಪ್ರಕರಣಗಳಿಂದ 767 ಮಂದಿ, 2024ರಲ್ಲಿ 739 ಪ್ರಕರಣಗಳಿಂದ 969 ಮಂದಿ ಹಾಗೂ 2025ರ ಜುಲೈವರೆಗಿನ 549 ಪ್ರಕರಣಗಳಿಂದ 407 ಮಂದಿಯನ್ನು ಬಂಧಿಸಲಾಗಿದೆ. ಇವುಗಳಲ್ಲಿ 2,143 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. 83 ಪ್ರಕರಣಗಳು ಖುಲಾಸೆಯಾಗಿದ್ದು, ಒಂದೂ ಪ್ರಕರಣದಲ್ಲಿ ಶಿಕ್ಷೆ ಖಚಿತವಾಗಿಲ್ಲ.
ಇದೇ ಅವಧಿಯಲ್ಲಿ ಪ್ರತಿದಿನ ಸರಾಸರಿ 3 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಲೈಂಗಿಕ ಕಿರುಕುಳ ಮತ್ತು ಪತಿಯ ಕಿರುಕುಳ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ. ಎರಡೂವರೆ ವರ್ಷಗಳಲ್ಲಿ ಒಟ್ಟು 16,273 ಪ್ರಕರಣಗಳಿಂದ 19,312 ಮಂದಿಯನ್ನು ಬಂಧಿಸಿದ್ದು, 189 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆ ನೀಡಲಾಗಿದೆ.
ಪತಿಯ ಕಿರುಕುಳ ಪ್ರಕರಣಗಳು: ಎರಡೂವರೆ ವರ್ಷಗಳಲ್ಲಿ 7,516 ದೂರುಗಳು ದಾಖಲಾಗಿದ್ದು, 7,930 ಮಂದಿಯನ್ನು ಬಂಧಿಸಲಾಗಿದೆ. ಆದರೆ ಕೇವಲ 16 ಮಂದಿಗೆ ಮಾತ್ರ ಶಿಕ್ಷೆ ಖಚಿತವಾಗಿದೆ.
ಪರಿಚಯಸ್ಥರಿಂದಲೇ ದೌರ್ಜನ್ಯ: ಬಹುತೇಕ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಯ ಪರಿಚಿತರಾಗಿದ್ದಾರೆ. ಪ್ರೇಮ ಸಂಬಂಧದಲ್ಲಿ ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಸಾಧಿಸಿ ಬಳಿಕ ಮೋಸ ಮಾಡುವ ಘಟನೆಗಳು ಹೆಚ್ಚಾಗಿವೆ. ಜೊತೆಗೆ ಆನ್ಲೈನ್ ಪರಿಚಯ, ಸಾಮಾಜಿಕ ಜಾಲತಾಣಗಳಿಂದ ಪ್ರೇರಿತ ಸ್ನೇಹಗಳು ಆತ್ಮೀಯತೆಗೆ ತಿರುಗಿ ನಂತರ ವಿವಾದಕ್ಕೆ ಕಾರಣವಾಗುತ್ತಿವೆ. ಕೆಲವು ಸಂದರ್ಭಗಳಲ್ಲಿ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುವ ಪ್ರಕರಣಗಳೂ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
👉 ರಾಜ್ಯದಲ್ಲಿ ದಿನಕ್ಕೆ ಸರಾಸರಿ 16 ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಅಂಕಿಅಂಶ ಗಂಭೀರ ಚಿಂತೆಗೆ ಕಾರಣವಾಗಿದೆ.
