ಹಾಸನ, ಜೂನ್ 30: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳ ಸರಣಿಗೆ ಮತ್ತೊಂದು ನೋವಿನ ಘಟನೆ ಸೇರಿದ್ದು, ಗಡಿಯಲ್ಲಿ ದೇಶ ಕಾಯುತ್ತಿದ್ದ ಯೋಧ ಲೋಹಿತ್ (38) ರಜೆಯಲ್ಲಿದ್ದಾಗ ಜಮೀನಿನಲ್ಲಿ ಉಳುಮೆ ಮಾಡುವ ಸಂದರ್ಭ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ನಿವಾಸಿಯಾದ ಲೋಹಿತ್, ಕಳೆದ 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜೂನ್ 28 ರಂದು ರಜೆಯಾಗಿ ಊರಿಗೆ ಬಂದಿದ್ದರು. ತಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಾಗ ಅಪಘಾತದೊಂದಿಗೆ ಹೃದಯಾಘಾತ ಸಂಭವಿಸಿತು.

ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳೂ ಆಗಿದ್ದು, ತಕ್ಷಣ ಸ್ಥಳೀಯರು ಲೋಹಿತ್ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅವರು ಕೊನೆಯುಸಿರೆಳೆದರು.

ಈ ಪ್ರಕರಣದಿಂದಾಗಿ ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿದೆ ಎಂಬುದು ಚಿಂತಾಜನಕ ಸಂಗತಿಯಾಗಿದೆ.
ಹೃದಯಾಘಾತಕ್ಕೆ ಇಂಗ್ಲಿಷ್ ಪ್ರೊಫೆಸರ್ ಬಲಿ:
ಹೊಳೆನರಸೀಪುರದಲ್ಲಿ ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಮುತ್ತಯ್ಯ (58) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚನ್ನರಾಯಪಟ್ಟಣದ ನಿವಾಸಿಯಾಗಿದ್ದ ಮುತ್ತಯ್ಯ, ಇಂದು ಬೆಳಿಗ್ಗೆ ಕಾಲೇಜಿಗೆ ಬಂದ ವೇಳೆ ಹೊಳೆನರಸೀಪುರ ಬೈಪಾಸ್ ರಸ್ತೆಯಲ್ಲಿ ಟೀ ಕುಡಿಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರಾದರೂ, ಆಗಲೇ ಮುತ್ತಯ್ಯ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದ್ದಾರೆ. ಕಳೆದ 40 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಈ ಘಟನೆಗಳು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿವೆ.
ಈ ಘಟನೆಯಿಂದ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ಮುತ್ತಯ್ಯ ಅವರ ಅಗಲಿಕೆಗೆ ಸಂತಾಪ ಸೂಚಿಸಿ, ಕಾಲೇಜಿನಲ್ಲಿ ಶೋಕಾಚರಣೆ ಘೋಷಿಸಲಾಗಿದೆ.
ಸ್ಥಳೀಯರಲ್ಲಿ ಆತಂಕ:
ಉಡುಪಿಯಿಂದ ಹಾಸನದವರೆಗೆ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಜಡ ಜೀವನಶೈಲಿ, ತೀವ್ರ ಮಾದ್ಯಮ ಬಳಕೆ, ಅತಿಯಾದ ಒತ್ತಡ ಮತ್ತು ಆಹಾರಾಭ್ಯಾಸಗಳ ಕುರಿತು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
