ಶ್ರವಣಬೆಳಗೊಳ: 1993 ರಲ್ಲಿ ಶ್ರವಣಬೆಳಗೊಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ 1000 ನೇ ವರ್ಷದ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಆಯೋಜನೆ ಮಾಡಿ ಇಡೀ ವಿಶ್ವವೇ ಶ್ರವಣಬೆಳಗೊಳದತ್ತ ತಿರುಗಿ ನೋಡುವಂತೆ ಮಾಡಿದಂತಹವರು ವಿದ್ಯಾನಂದ ಮಹಾರಾಜರು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಸಂಸ್ಕೃತಿ ಸಚಿವಾಲಯ ಹಾಗೂ ಭಗವಾನ್ ಮಹಾವೀರ ಅಹಿಂಸಾ ಭಾರತಿ ಟ್ರಸ್ಟ್ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಆಚಾರ್ಯ ಶ್ರೀ ಪ್ರಜ್ಞಾಸಾಗರ ಮಹಾರಾಜರು ಹಾಗೂ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೈನ ನೀತಿಶಾಸ್ತ್ರ, ಪ್ರಾಕೃತ ಸಾಹಿತ್ಯ ಮತ್ತು ಶಾಸ್ತ್ರೀಯ ಭಾರತೀಯ ಚಿಂತನೆಯ ಕುರಿತು 50ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜರು ಹಲವಾರು ಐತಿಹಾಸಿಕ ಜೈನ ದೇವಾಲಯಗಳ ಪುನರುಜ್ಜೀವನ ಮತ್ತು ಸಾಂಪ್ರದಾಯಿಕ ಶಿಕ್ಷಣದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಪ್ರಯತ್ನಗಳು ಜೈನ ಪರಂಪರೆಯ ಸಂರಕ್ಷಣೆ ಮತ್ತು ಪ್ರಾಚೀನ ಭಾರತೀಯ ಭಾಷೆಗಳಲ್ಲಿ ಆಸಕ್ತಿಯ ಪುನರುಜ್ಜೀವನಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿದೆ ಎಂದು ಹೇಳಿದರು.
ಅಭಿನವ ಚಾರುಕೀರ್ತಿ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ, ಆಚಾರ್ಯಶ್ರೀ ವಿದ್ಯಾನಂದ ಮಹಾರಾಜರು ದೇಶದಾದ್ಯಂತ ವಿಹಾರ ಮಾಡಿ ಜೈನ ಧರ್ಮವನ್ನು ಪ್ರಚುರಪಡಿಸಿ, ಭಗವಾನ್ ಮಹಾವೀರಸ್ವಾಮಿಯವರ ಸಂದೇಶವನ್ನು ಇಡೀ ವಿಶ್ವಕ್ಕೆ ತಲುಪಿಸಿದಂತಹವರು ಹಾಗೂ ಹಲವಾರು ಪ್ರಾಚೀನ ಮಂದಿರಗಳು, ಪ್ರಾಚೀನ ಶಾಸ್ತ್ರಗಳನ್ನು ಸಂರಕ್ಷಣೆ ಮಾಡುವಲ್ಲಿ ಪ್ರಮುಖಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಭಗವಾನ್ ಮಹಾವೀರರ 2500 ನೇ ವರ್ಷದ ನಿರ್ವಾಣ ಮಹೋತ್ಸವವನ್ನು ದೇಶದಾದ್ಯಂತ ಧರ್ಮಚಕ್ರ ಶ್ರೀವಿಹಾರ ಮಾಡುವ ಮೂಲಕ ಧರ್ಮಪ್ರಭಾವನೆ ಮಾಡಿ, ಶ್ರವಣಬೆಳಗೊಳದಲ್ಲಿ ಧರ್ಮಚಕ್ರವನ್ನು ಸ್ಥಾಪನೆ ಮಾಡಿದ ವಿದ್ಯಾನಂದ ಮಹಾರಾಜರು ಶ್ರವಣಬೆಳಗೊಳದ ಹಿಂದಿನ ಗುರುಗಳಾಗಿದ್ದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಗುರುಗಳು ಮತ್ತು ಮಾರ್ಗದರ್ಶಕರಾಗಿದ್ದರು.
ಈ ಸಂದರ್ಭದಲ್ಲಿ ಆಚಾರ್ಯ ವಿದ್ಯಾನಂದ ಮಹಾರಾಜರ ಭಾವಚಿತ್ರ ಇರುವ ಒಂದು ನೂರು ರೂಪಾಯಿ ಮುಖಬೆಲೆಯ ನಾಣ್ಯ ಹಾಗೂ ಸ್ಟ್ಯಾಂಪ್ ನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು ಹಾಗೂ ನರೇಂದ್ರ ಮೋದಿಯವರಿಗೆ ಧರ್ಮ ಚಕ್ರವರ್ತಿ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.

[…] ಇದನ್ನು ಓದಿ: ಶ್ರವಣಬೆಳಗೊಳ: ಆಚಾರ್ಯ ವಿದ್ಯಾನಂದ ಮಹಾರಾಜ… […]
[…] ಇದನ್ನು ಓದಿ: ಶ್ರವಣಬೆಳಗೊಳ: ಆಚಾರ್ಯ ವಿದ್ಯಾನಂದ ಮಹಾರಾಜ… […]