ರಾಮನಾಥಪುರ: ಪಟ್ಟಣದ ಕೃಷಿಕರಾದ ಆರ್.ಎನ್. ಪಟ್ಟಾಭಿ ಅವರ ಪುತ್ರ ಆರ್.ಪಿ. ಶ್ರೇಯಸ್ ಅವರು ಹಾಸನ ಸೆಂಟ್ರಲ್ ಕಾಮರ್ಸ್ ಕಾಲೇಜಿನಲ್ಲಿ 573 ಅಂಕಗಳನ್ನು (ಶೇ. 95.5) ಗಳಿಸಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದರಿಂದ ಕುಟುಂಬ ಹಾಗೂ ಶಿಕ್ಷಣ ಸಂಸ್ಥೆಗೆ ಗೌರವ ತಂದಿರುವ ಶ್ರೇಯಸ್ ಅವರ ಸಾಧನೆಗೆ ಶಿಕ್ಷಕರು, ಬಂಧುಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ವೇಳೆ ಸಮೀಪದ ದೊಡ್ಡಮಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 81 ವಿದ್ಯಾರ್ಥಿಗಳಲ್ಲಿ 78 ಮಂದಿ ಉತ್ತೀರ್ಣರಾಗಿದ್ದು, ಒಟ್ಟು ಶೇ. 96 ಫಲಿತಾಂಶ ದಾಖಲಾಗಿದೆ. ಇವರಲ್ಲಿ 18 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 28 ವಿದ್ಯಾರ್ಥಿಗಳ ಪೈಕಿ 25 ಮಂದಿ ಉತ್ತೀರ್ಣರಾಗಿದ್ದು, 7 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆ. ಕಲಾ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದ್ದು, ಒಟ್ಟು 14 ವಿಷಯಗಳಲ್ಲಿ 13 ವಿಷಯಗಳಿಗೆ ಶೇ.100 ಫಲಿತಾಂಶ ದೊರೆತಿದೆ.
ವೈಯಕ್ತಿಕ ಸಾಧನೆಗಳಲ್ಲಿ ಕಲಾ ವಿಭಾಗದ ಎಸ್.ಎಲ್. ಧನಂಜಯ 538 ಅಂಕ, ವಾಣಿಜ್ಯ ವಿಭಾಗದ ಪವಿತ್ರಾ 549 ಅಂಕ ಹಾಗೂ ವಿಜ್ಞಾನ ವಿಭಾಗದ ಆಶಾ 544 ಅಂಕಗಳನ್ನು ಪಡೆದು ಮೆರೆದಿದ್ದಾರೆ.
ಶೇ.100 ಫಲಿತಾಂಶಕ್ಕೆ ಕಾರಣರಾದ ಉಪನ್ಯಾಸಕರಿಗೆ ಕಾಲೇಜಿನ ಪ್ರಾಂಶುಪಾಲೆ ಫರ್ಜಾನಾ ಅಂಜು ಅವರು ಪ್ರತಿ ಶಿಕ್ಷಕರಿಗೂ ರೂ. 5,000 ಪ್ರೋತ್ಸಾಹಧನ ನೀಡಿ ಅಭಿನಂದಿಸಿದ್ದಾರೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
