ಹಾಸನ, ಮಾ.23: ಹಣಕಾಸು ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸು ಯುವಕನೊಬ್ಬನ ಅಪಹರಣೆ ಮತ್ತು ಕ್ರೂರ ಹತ್ಯೆಗೆ ಕಾರಣವಾದ ಬೆಚ್ಚಿಬೀಳಿಸುವ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರುಣ್ ಕೆ.ಎಂ. ಎಂಬ ಯುವಕನನ್ನು ಅಪಹರಿಸಿ ಎರಡು ದಿನಗಳ ಕಾಲ ನಿರ್ದಯವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಪ್ರಕರಣದಲ್ಲಿ ಸತೀಶ್, ಉಮರ್, ವಿಜಯ ನಾಯಕ್, ದಾಸರಕೊಪ್ಪಲು ಚೇತನ್ ಹಾಗೂ ಮನು ಅವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು.

ಪ್ರಕರಣದ ಪ್ರಮುಖ ಆರೋಪಿ ಶಶಾಂಕ್ ವರುಣ್ಗೆ ₹7 ಸಾವಿರ ಹಣ ನೀಡಿದ್ದನು. ಆ ಹಣವನ್ನು ಹಿಂದಿರುಗಿಸದ ಹಿನ್ನೆಲೆ ಉಂಟಾದ ವೈಮನಸ್ಸೇ ಈ ಕೃತ್ಯಕ್ಕೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಎಸ್ಪಿ ಹೇಳಿದರು.
ಮಾ.10ರಂದು ‘ಬೈಕ್ ರಿಪೇರಿ ಮಾಡಿಸಿಕೊಂಡು ಬರುತ್ತೇನೆ’ ಎಂದು ಹೇಳಿ ಮನೆಯಿಂದ ಹೊರಟಿದ್ದ ವರುಣ್ ಬಳಿಕ ಮನೆಗೆ ಮರಳಿರಲಿಲ್ಲ. ಅದೇ ದಿನ ಹಣಕಾಸು ವಿಚಾರಕ್ಕೆ ಸಂಬಂಧಿಸಿ ವರುಣ್ ಹಾಗೂ ಆತನ ಸ್ನೇಹಿತ ಲೋಹಿತ್ ಅವರನ್ನು ದುಷ್ಕರ್ಮಿಗಳು ಕರೆದುಕೊಂಡು ಹೋಗಿ, ಹಾಸನ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಬಂಧಿಸಿ ಹಲ್ಲೆ ನಡೆಸಿದ್ದರು.
ಮಾ.11ರಂದು ಮಧ್ಯಾಹ್ನ ನೀರು ತರಲು ಕಳುಹಿಸಿದ ವೇಳೆ ಲೋಹಿತ್ ಆರೋಪಿಗಳಿಂದ ತಪ್ಪಿಸಿಕೊಂಡು ಪಾರಾಗಿ ಗ್ರಾಮಕ್ಕೆ ಬಂದು ಘಟನೆ ಕುರಿತು ಮಾಹಿತಿ ನೀಡಿದ್ದಾನೆ. ಇದೇ ವೇಳೆ ನಿರಂತರ ಹಲ್ಲೆಯಿಂದ ವರುಣ್ ಮೃತಪಟ್ಟಿದ್ದಾನೆ ಎಂದು ಎಸ್ಪಿ ವಿವರಿಸಿದರು.
ನಂತರ ಆರೋಪಿಗಳು ಮೃತದೇಹವನ್ನು ಹಂಗರಹಳ್ಳಿಯಿಂದ ಗುಂಡೇಗೌಡನಕೊಪ್ಪಲು ಗ್ರಾಮಕ್ಕೆ ಸಾಗಿಸಿ, ಎರಡು ದಿನಗಳ ಕಾಲ ಒಂದು ಕೊಠಡಿಯಲ್ಲಿ ಇಟ್ಟು ಮಾ.13ರಂದು ಸುಟ್ಟುಹಾಕಿದ್ದಾರೆ. ವರುಣ್ ತಾಯಿ ಮಾ.15ರಂದು ಗಂಡಸಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಮಾ.19ರಂದು ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗುತ್ತಿದ್ದಂತೆ ಕೊಲೆ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ಹಿಂದಿನ ಯಾವುದೇ ಕ್ರಿಮಿನಲ್ ಪ್ರಕರಣಗಳ ದಾಖಲೆ ಇಲ್ಲದಿದ್ದರೂ, ಗಾಂಜಾ ಸೇವನೆ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ಎಸ್ಪಿ ತಿಳಿಸಿದರು.
ಮೃತದೇಹ ಸಂಪೂರ್ಣವಾಗಿ ಸುಟ್ಟಿರುವುದರಿಂದ ಬಯೋಲಾಜಿಕಲ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ವೈದ್ಯಕೀಯ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ
ಇದೇ ವೇಳೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ ಒಟ್ಟು 56 ಎನ್ಡಿಪಿಎಸ್ ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ತಿಳಿಸಿದರು. ಅವುಗಳಲ್ಲಿ 45 ಗಾಂಜಾ ಪ್ರಕರಣಗಳು, 3 ಜನರ ವಿರುದ್ಧ ಕೋಕಾ ಕಾಯ್ದೆ, ಹಾಗೂ 8 ಜನರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.
ಭ್ರಷ್ಟಾಚಾರ ಆರೋಪದ ಹಿನ್ನೆಲೆ ಒಬ್ಬ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ ಎಂದರು.
