ಬೆಂಗಳೂರು/ಹಾಸನ, ಮಾ.19: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದ ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಮಹತ್ವದ ಬೆಳವಣಿಗೆಯಾಗಿ ಹಾಸನ ಸಿವಿಲ್ ಕೋರ್ಟ್ಗೆ 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ.
ಪ್ರಕರಣದಲ್ಲಿ ಒಟ್ಟು 39 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ತನಿಖೆಯಲ್ಲಿ 70 ಪೆನ್ಡ್ರೈವ್ ಖರೀದಿಸಿ ವಿಡಿಯೋ ಹಂಚಿಕೆ ಮಾಡಿರುವುದು ಬಹಿರಂಗವಾಗಿದೆ.
ವಕೀಲ ಪೂರ್ಣಚಂದ್ರ ನೀಡಿದ ದೂರಿನ ಮೇರೆಗೆ ದಾಖಲಾಗಿದ್ದ ಎಫ್ಐಆರ್ ಆಧರಿಸಿ ತನಿಖೆ ಕೈಗೊಂಡ ಎಸ್ಐಟಿ, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ವೈರಲ್ ಆಗಿದ್ದ ಅಶ್ಲೀಲ ವಿಡಿಯೋಗಳ ಹಂಚಿಕೆ ಕುರಿತು ಆಳವಾದ ತನಿಖೆ ನಡೆಸಿದೆ. ಪ್ರಕರಣದಲ್ಲಿ ಆರಂಭದಲ್ಲಿ 52 ಮಂದಿಯ ಹೆಸರು ಉಲ್ಲೇಖ ಮಾಡಲಾಗಿದ್ದರೂ, ಅಂತಿಮವಾಗಿ 39 ಮಂದಿಯ ವಿರುದ್ಧ ಆರೋಪ ಸಾಬೀತಾಗಿದೆ ಎಂದು ತಿಳಿದುಬಂದಿದೆ.
277 ಸಾಕ್ಷಿಗಳ ಹೇಳಿಕೆ, ತಾಂತ್ರಿಕ ವರದಿ ಆಧಾರ
ಈ ಪ್ರಕರಣದ ತನಿಖೆಯ ಭಾಗವಾಗಿ ಎಸ್ಐಟಿ 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ. ತಾಂತ್ರಿಕ ವಿಶ್ಲೇಷಣೆ, ಎಫ್ಎಸ್ಎಲ್ ವರದಿ ಹಾಗೂ ಇತರ ಡಿಜಿಟಲ್ ಸಾಕ್ಷ್ಯಾಧಾರಗಳ ಆಧಾರದ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ತನಿಖೆಯಲ್ಲಿ ಹಾಸನದಲ್ಲಿಯೇ 70 ಪೆನ್ಡ್ರೈವ್ಗಳನ್ನು ಖರೀದಿಸಿ ಅವುಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ತುಂಬಿ ಹಂಚಿಕೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ.
ಪ್ರಜ್ವಲ್ ರೇವಣ್ಣ ಹೆಸರು ಕೈಬಿಟ್ಟ ಎಸ್ಐಟಿ
ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ಹೆಸರುಗಳು ಕೇಳಿಬಂದಿದ್ದರೂ, ವಿಡಿಯೋ ವೈರಲ್ ಪ್ರಕರಣದ ಈ ಚಾರ್ಜ್ಶೀಟ್ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಎಸ್ಐಟಿ ಕೈಬಿಟ್ಟಿದೆ. ತನಿಖೆ ಪೂರ್ಣಗೊಳಿಸಿ ಹಾಸನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
39 ಆರೋಪಿಗಳ ವಿರುದ್ಧ ದೋಷಾರೋಪಣೆ
ಎಸ್ಐಟಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಎ1 ನವೀನ್, ಎ2 ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಎನ್., ಎ3 ಚೇತನ್ ಬಿ.ಸಿ., ಎ4 ಚೇತನ್ ವೈ.ಎಸ್., ಎ5 ಲಿಖಿತ್ಗೌಡ, ಎ6 ದೇವರಾಜೇಗೌಡ ಸೇರಿದಂತೆ ಒಟ್ಟು 39 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್
ಈ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರಾದ ಶರತ್ ಮತ್ತು ಕಿರಣ್, ಹಾಗೆಯೇ ಸಂಸದ ಶ್ರೇಯಸ್ ಪಟೇಲ್ ಅವರ ಆಪ್ತರಾಗಿರುವ ಪುಟ್ಟರಾಜು ಅವರಿಗೆ ಎಸ್ಐಟಿ ತನಿಖೆಯಿಂದ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಪ್ರಾಥಮಿಕ ಆರೋಪಗಳಲ್ಲಿ ಇವರ ಹೆಸರುಗಳಿದ್ದರೂ, ತನಿಖೆಯಲ್ಲಿ ಇವರ ವಿರುದ್ಧ ಸಾಕ್ಷ್ಯ ಸಾಬೀತಾಗದ ಹಿನ್ನೆಲೆಯಲ್ಲಿ ಎಸ್ಐಟಿ ದೋಷಾರೋಪ ಪಟ್ಟಿಯಿಂದ ಇವರ ಹೆಸರುಗಳನ್ನು ಕೈಬಿಟ್ಟಿದೆ.
ಮಾಜಿ ಆಪ್ತರೇ ವೈರಲ್ ಜಾಲದ ರೂವಾರಿಗಳು?
ಎಸ್ಐಟಿ ತನಿಖೆಯಲ್ಲಿ ಬಹಿರಂಗವಾದ ಮಾಹಿತಿ ಪ್ರಕಾರ, ಪ್ರಜ್ವಲ್ ರೇವಣ್ಣ ಅವರ ಮಾಜಿ ಆಪ್ತರು ಮತ್ತು ಮಾಜಿ ಜೆಡಿಎಸ್ ಕಾರ್ಯಕರ್ತರೇ ವಿಡಿಯೋ ವೈರಲ್ ಜಾಲದ ಪ್ರಮುಖ ರೂವಾರಿಗಳಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಪ್ರಜ್ವಲ್ ಅವರೊಂದಿಗೆ ಹಲವು ವರ್ಷಗಳಿಂದ ಸಂಪರ್ಕ ಹೊಂದಿದ್ದ ನವೀನ್ ಗೌಡ, ಕಾರ್ತಿಕ್, ಚೇತನ್ ಹಾಗೂ ಹರೀಶ್ ಈ ಪ್ರಕರಣದ ಪ್ರಮುಖ ಕೊಂಡಿಗಳಾಗಿದ್ದಾರೆ ಎಂದು ತನಿಖೆ ಸೂಚಿಸಿದೆ. ವಿಶೇಷವಾಗಿ, ಕಾರು ಚಾಲಕ ಕಾರ್ತಿಕ್ ತನ್ನ ಮೊಬೈಲ್ ಮೂಲಕ ವಿಡಿಯೋಗಳನ್ನು ಕದ್ದಿದ್ದಾನೆ ಎಂಬ ಅಂಶವೂ ತನಿಖೆಯಲ್ಲಿ ಹೊರಬಂದಿದೆ.
ಪ್ರಜ್ವಲ್ ಕುಟುಂಬದ ವ್ಯವಹಾರಗಳ ಆಡಿಟ್ ಕೆಲಸ ನೋಡುತ್ತಿದ್ದ ನವೀನ್, ಹಾಗೂ ಹಿಂದೆ ಜೆಡಿಎಸ್ನಲ್ಲಿದ್ದ ಚೇತನ್, ನಂತರ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ಇದೇ ವೇಳೆ ಹರೀಶ್ ಕೂಡ ಇವರೊಂದಿಗೆ ಸಂಪರ್ಕದಲ್ಲಿದ್ದನು ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ದೇವರಾಜೇಗೌಡ ಆರೋಪದ ಬಳಿಕ ಚಟುವಟಿಕೆ ವೇಗ
ದೇವರಾಜೇಗೌಡ ಅವರು ಸುದ್ದಿಗೋಷ್ಠಿಯಲ್ಲಿ ಪ್ರಜ್ವಲ್ ರೇವಣ್ಣ ಅವರ ಬಳಿ ಅಶ್ಲೀಲ ವಿಡಿಯೋಗಳಿವೆ ಎಂದು ಆರೋಪಿಸಿದ ಬಳಿಕ, ಚೇತನ್, ನವೀನ್ ಮತ್ತು ಹರೀಶ್ ಸೇರಿ ಕಾರ್ತಿಕ್ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ನಂತರ ಪೆನ್ಡ್ರೈವ್ಗಳನ್ನು ಖರೀದಿಸಿ ಅದರಲ್ಲಿ ಅಶ್ಲೀಲ ವಿಡಿಯೋಗಳನ್ನು ತುಂಬಿ ಹಂಚಿಕೆ ಮಾಡಿದ್ದಾರೆ ಎಂದು ಎಸ್ಐಟಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಪ್ರಕರಣಕ್ಕೆ ಹೊಸ ತಿರುವು
ಒಟ್ಟಾರೆಯಾಗಿ, ಈ ಚಾರ್ಜ್ಶೀಟ್ ಸಲ್ಲಿಕೆಯಿಂದ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ವಿಡಿಯೋ ವೈರಲ್ ಜಾಲದ ಹಿಂದೆ ಇದ್ದವರ ಕುರಿತು ಮಹತ್ವದ ಅಂಶಗಳು ಬಹಿರಂಗವಾಗಿವೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.
