ಹಾಸನ: ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕೌಶಲ್ಯ ಆಧಾರಿತ ವಾಣಿಜ್ಯ ಕೋರ್ಸ್ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಇರ್ಷಾದ್ ತಿಳಿಸಿದ್ದಾರೆ.
ಪದವಿ ಪೂರ್ವ ವಾಣಿಜ್ಯ ವಿಭಾಗದ ಪಿಯುಸಿ ವಿದ್ಯಾರ್ಥಿಗಳಿಗೆ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ೪ ವರ್ಷ ಅವಧಿಯ ಕೌಶಲ್ಯ ಹಾಗೂ ಉದ್ಯೋಗ ಆಧಾರಿತ ನೂತನ ಬಿ.ಕಾಂ ಕೋರ್ಸ್ಗೆ ಕಳೆದ ಸಾಲಿನಿಂದ ಪ್ರವೇಶಾತಿ ಆರಂಭಿಸಿಲಾಗಿದೆ ಎಂದ ಅವರು, ಕೌಶಲ್ಯ ಆಧಾರಿತ ಬಿ.ಕಾಂ. ಕೋರ್ಸ್ನಿಂದ ವಿದ್ಯಾರ್ಥಿಗಳಿಗೆ ತಮ್ಮ ಜೀವನ ರೂಪಿಸಿಕೊಳ್ಳಲು ಉಪಯೋಗವಾಗಲಿದೆ ಎಂದರು.
4 ವರ್ಷ ಅವಧಿಯ ಕೋರ್ಸ್ನಲ್ಲಿ ಮೊದಲ 2ವರ್ಷ ಅವಧಿ ವಿದ್ಯಾರ್ಥಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲಿದ್ದು ಇನ್ನುಳಿದ 2 ವರ್ಷ ಕಾಲೇಜಿನೊಂದಿಗೆ ಎಂಓಯು ಮಾಡಿಕೊಂಡಿರುವ ಕಂಪನಿಗಳಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಕೆಲಸದ ಅವಧಿಯಲ್ಲಿ ವಿದ್ಯಾರ್ಥಿಗೆ ಸ್ಟೇಫಂಡ್ ಕೂಡ ನೀಡಲಾಗುವುದು. ಕಂಪನಿಗಳಿಂದ ವಿದ್ಯಾರ್ಥಿಯ ಕರ್ತವ್ಯದ ರಿಪೊರ್ಟ್ ಅನ್ನು ಕಾಲೇಜಿಗೆ ನೀಡುತ್ತಾರೆ ತದ ನಂತರ ಕರ್ತವ್ಯದ ಆಧಾರದ ಮೇಲೆ ವಿದ್ಯಾರ್ಥಿಗೆ ೪ ವರ್ಷ ಅವಧಿಯ ಪದವಿ ನೀಡಲಾಗುವುದು ಎಂದರು. ವಿದ್ಯಾರ್ಥಿಯ ಕೆಲಸ ಕಂಪನಿಗಳಿಗೆ ಇಷ್ಟವಾಗಿದ್ದರೆ ಆ ವಿದ್ಯಾರ್ಥಿಯನ್ನು ಪದವಿ ನಂತರ ಪೂರ್ಣಾವಧಿಗೆ ನೇಮಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಇದರಿಂದ ತಮ್ಮ ಕಲಿಕೆಯ ಅವಧಿಯಲ್ಲಿಯೇ ಉದ್ಯೋಗ ಪಡೆದುಕೊಳ್ಳಲು ಸಹಾಯವಾಗಲಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಲಭ್ಯವಿದ್ದು ಹೆಚ್ಚಿನ ಅರ್ಜಿಗಳು ಕಂಡು ಬಂದರೆ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು. ಕೋರ್ಸ್ ಸಂಪೂರ್ಣ ಉಚಿತವಾಗಿದ್ದು ವಾಣಿಜ್ಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಅಲ್ಲದೆ ಕಾಲೇಜಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.
