ಹಾಸನ, ಮಾ.22: ಮನುಷ್ಯನು ಹುಟ್ಟಿದ ಬಳಿಕ ಬಾಳಿನಲ್ಲಿ ಸಾರ್ಥಕತೆ ಕಂಡುಕೊಳ್ಳಲು ಪ್ರೀತಿ, ಮಾನವೀಯತೆ ಮತ್ತು ಸಮಾಜಸೇವೆಯ ಮೌಲ್ಯಗಳನ್ನು ಅರಿತು ನಡೆಬೇಕು ಎಂದು ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಸೈಬರ್ ಪೊಲೀಸ್ ಬೆಂಗಳೂರು ಹೇಮಂತ್ ಕುಮಾರ್ ಹೇಳಿದರು.
ಅವರು ಹಾಸನ ಜಿಲ್ಲೆಯ ಕೊಣಸೂರು ಗ್ರಾಮದಲ್ಲಿ ಸಮಾಜ ಸೇವಕ ರಾಜಪ್ಪ ಹಾಗೂ ಅವರ ಧರ್ಮಪತ್ನಿ ರತ್ನಮ್ಮ ಅವರ ಷಷ್ಠಿಪೂರ್ತಿ ಕಾರ್ಯಕ್ರಮ ಅಂಗವಾಗಿ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದರು.
ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವದ ಮೂಲಕ ರಾಜಪ್ಪ–ರತ್ನಮ್ಮ ದಂಪತಿ ಅನೇಕ ಜನರ ಬದುಕಿಗೆ ಬೆಳಕು ತಂದಿದ್ದು, ಸಮಾಜಕ್ಕೆ ನಂದಾದೀಪದಂತೆ ಸಂದೇಶ ನೀಡಿದ್ದಾರೆ ಎಂದು ಪ್ರಶಂಸಿಸಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅನೇಕ ಕುಟುಂಬಗಳಿಗೆ ನೆರವಾದ ಇವರ ಜೀವನ ಪಯಣ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ರಾಜಪ್ಪ ಅವರ ಸಮಾಜಪರ ಕಾರ್ಯವೈಖರಿಯನ್ನು ಕೊಂಡಾಡಿದ ಗಣ್ಯರು, ಅವರು ಇಂದಿಗೂ ಜನಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನಾರ್ಹ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ, ದಂಪತಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಅಭಿಮಾನಿಗಳು, ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳು ಭಾಗವಹಿಸಿ ಶುಭಾಶಯ ಕೋರಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಮಂದಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
